ಸಾಧಕರಿಗೆ ಶ್ರೀ ಕೇಶವ ಸ್ಮೃತಿ ಪ್ರಶಸ್ತಿ ಪ್ರದಾನ
ಹಿರಿಯರಿಂದ ಬಂದ ಸದ್ವಿದ್ಯೆ, ಸಂಸ್ಕಾರಗಳನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವ ಮೂಲಕ ನಮ್ಮ ಬದುಕನ್ನೂ ಬೆಳಗುವ ಕಾರ್ಯ ಆಗಬೇಕು. ಸಂಸ್ಕಾರ ಉಳಿಯುವ ಮನೆಗಳ ಮಕ್ಕಳ ಮೂಲಕ ನಾವೂ ಉಳಿಯುತ್ತೇವೆ ಎಂದು ಶ್ರೀ ಸಂಪುಟ ನರಸಿಂಹ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.
ಸುಳ್ಯದ ಹಳೆಗೇಟು ವಿದ್ಯಾನಗರದಲ್ಲಿರುವ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದಲ್ಲಿ ನಡೆದ ಶ್ರೀ ಕೇಶವಕೃಪಾ ವೇದ ಕಲಾ ಮತ್ತು ಯೋಗ ಶಿಬಿರದ ಸಮಾಪನ ಸಮಾರಂಭ ಮತ್ತು ಶ್ರೀ ಕೇಶವ ಸ್ಮೃತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾನ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಕೃತ ಅಧ್ಯಾಪಕ ಪಿ.ವಿ. ಶ್ರೀಹರಿ ಶರ್ಮ ಪಾದೆಕಲ್ಲು ಅಭಿನಂದನಾ ಭಾಷಣ ಮಾಡಿದರು. ಖ್ಯಾತ ಜ್ಯೋತಿಷ್ಯ ವಿದ್ವಾಂಸ ಬ್ರಹ್ಮಶ್ರೀ ಶ್ರೀಧರ ಗೋರೆ ನೆಲ್ಯಾಡಿ, ಯೋಗ ಸಂಪನ್ಮೂಲ ವ್ಯಕ್ತಿ ಆರ್.ವಿ. ಭಂಡಾರಿ, ಸಂಗೀತ ವಿದ್ವಾಂಸ ಯಜ್ಞೇಶ್ ಆಚಾರ್ಯ ಸುಬ್ರಹ್ಮಣ್ಯ ಇವರಿಗೆ ೨೦೨೨ರ ಶ್ರೀ ಕೇಶವ ಸ್ಮೃತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಿಬಿರದ ಸರ್ವ ಪ್ರಥಮ ಮತ್ತು ಪ್ರತಿಭಾ ಪುರಸ್ಕಾರ ನೀಡಲಾಯಿತು. ಸರ್ವ ಪ್ರಥಮ ಪ್ರಶಸ್ತಿಗೆ ಅಭಿರಾಮ ಭಟ್ ವಿ., ಅನ್ವೇಷ ಕೃಷ್ಣ, ಆತ್ರೇಯ ರಾಮ ಶರ್ಮ ಭಾಜನರಾದರು. ಕೇಶವ ಪ್ರತಿಭಾ ಪುರಸ್ಕಾರಕ್ಕೆ ಸಾತ್ವಿಕ ಕೃಷ್ಣ ನಾರಾವಿ, ವಿಭು ಭಟ್ ಪಾದೆಕಲ್ಲು ಆಯ್ಕೆಯಾದರು.
ಪ್ರತಿಷ್ಠಾನದ ಗೌರವಾಧ್ಯಕ್ಷ ಎಂ. ಗೋಪಾಲಕೃಷ್ಣ ಭಟ್ ವಗೆನಾಡು , ಶಂಕರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ಸ್ವಾಗತಿಸಿ ಪ್ರಸ್ತಾವನೆಗೈದರು. ಶ್ರೀದೇವಿ ನಾಗರಾಜ ಭಟ್ , ಸುದರ್ಶನ ಭಟ್ ಕಾರ್ಯಕ್ರಮ ನಿರೂಪಿಸಿದರು.