ಬಲಿಷ್ಠ ತಂಡಗಳ ನಡುವೆ ರೋಚಕ ಹಣಾಹಣಿಗೆ ಸಾಕ್ಷಿಯಾದ ಮೊದಲ ಪಂದ್ಯ
ಕೇರಳ ಪೊಲೀಸ್ ಗೆ ಶರಣಾದ ಚೆನ್ನೈ ಐ.ಸಿ.ಎಫ್.
ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಶನ್, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಮತ್ತು ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ಸಂಘಟನಾ ಸಮಿತಿ ಆಶ್ರಯದಲ್ಲಿ ಐದು ದಿನಗಳ ಕಾಲ ನಡೆಯಲಿರುವ ಆಹ್ವಾನಿತ ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ಶಿಪ್ ಸುಳ್ಯದಲ್ಲಿ ಆರಂಭಗೊಂಡಿದೆ.
ನಿರಂತರ ಮಳೆಯ ಪರಿಣಾಮ ಒದ್ದೆಯಾಗಿದ್ದ ಕ್ರೀಡಾಂಗಣವನ್ನು ಸಂಘಟಕರು ಆಟಕ್ಕೆ ಸಜ್ಜುಗೊಳಿಸಿದ ನಂತರ ಮೊದಲ ಪಂದ್ಯ ನಡೆಯಿತು.
ಮಹಿಳೆಯರ ಮೊದಲ ಪಂದ್ಯಾಟದಲ್ಲಿ ಕೇರಳ ಪೊಲೀಸ್ ಮತ್ತು ಐ.ಸಿ.ಎಫ್. ಚೆನ್ನೈ ತಂಡಗಳು ಮುಖಾಮುಖಿಯಾಯಿತು. ಇತ್ತಂಡಗಳಲ್ಲೂ ಭಾರತ ವಾಲಿಬಾಲ್ ತಂಡವನ್ನು ಪ್ರತಿನಿಧಿಸಿದ ಅಂತರಾಷ್ಟ್ರೀಯ ಆಟಗಾರರು ಸಾಕಷ್ಟಿದ್ದರು. ಅಂತರ್ ರಾಷ್ಟ್ರೀಯ ಆಟಗಾರ್ತಿಯರಾದ ಆದಿರಾ ಎಂ.ಆರ್. ಸಾರಥ್ಯದಲ್ಲಿ ಕೇರಳ ತಂಡವೂ , ಆಂಜೆಲ್ ನೇತೃತ್ವದಲ್ಲಿ ಚೆನ್ನೈ ತಂಡವೂ ಕಣಕ್ಕಿಳಿದಿತ್ತು.
ಮಳೆಯಿಂದಾಗಿ ತಂಪಾಗಿದ್ದ ವಾಲಿಬಾಲ್ ಕೋರ್ಟ್ ಬಿರುಸಿನ ಆಟಕ್ಕೆ ಬಿಸಿಯಾಯಿತು. ಅದ್ಭುತ ಹೊಂದಾಣಿಕೆಯ ಆಟ ಪ್ರದರ್ಶಿಸಿದ ಕೇರಳ ತಂಡವು 3 – 0 ನೇರ ಸೆಟ್ ಗಳಿಂದ ಚೆನ್ನೈ ತಂಡವನ್ನು ಮಣಿಸಿತು. ಸ್ಕೋರ್ ವಿವರ 25 – 21, 25 – 23 ಮತ್ತು 25 – 19
ಮೊದಲ ಸೆಟ್ ನಲ್ಲಿ ಆರಂಭಿಕ ಹಿನ್ನಡೆ ಕಂಡ ಕೇರಳ ಕ್ಷಣ ಮಾತ್ರದಲ್ಲಿ ಲೀಡ್ ಪಡೆಯಿತು. ಆ ಬಳಿಕ ಹಿಂತಿರುಗಿ ನೋಡಲಿಲ್ಲ.
ಎತಡನೇ ಸೆಟ್ ಬಹುತೇಕ ಸಮಬಲದಿಂದಲೇ ಮುನ್ನಡೆಯಿತು. ಒಂದು ಹಂತದಲ್ಲಿ ಒಂದು ಅಂಕದ ಲೀಡ್ ಪಡೆದಿದ್ದ ಚೆನ್ನೈ ನಂತರ ಯಶಸ್ಸು ಸಾಧಿಸಲಿಲ್ಲ.
ಎರಡು ಸೆಟ್ ಗಳ ಸತತ ಹಿನ್ನಡೆ ಅನುಭವಿಸಿದ ಚೆನ್ನೈ ತಂಡ ಮೂರನೇ ಹಂತದಲ್ಲಿ ಪ್ರತಿರೋಧ ತೋರುವಲ್ಲಿ ವಿಫಲವಾಯಿತು. ಅಂತವಾಗಿ ಕೇರಳ ಮೂರು ಸೆಟ್ ಗಳಲ್ಲಿ ಪಂದ್ಯ ಮುಗಿಸಿತು.
ಇತ್ತಂಡಗಳೂ ಪ್ರತಿಭಾ ಸಂಪನ್ನರ ಸಂಗಮವಾಗಿತ್ತು. ಕೇರಳ ತಂಡದ ಸೇತು ಲಕ್ಷ್ಮಿ ಸರ್ವಾಂಗೀಣ ಆಟ ಪ್ರದರ್ಶಿಸಿದರೆ ಅಂಜು ಮೋಳ್, ಅನಘ ಅತ್ಯುತ್ತಮ ಸ್ಮಾಶ್ ಗಳ ಮೂಲಕ ತಂಡಕ್ಕೆ ಮುನ್ನಡೆ ತಂದಿಟ್ಟರು. ದೈತ್ಯ ದೇಹಿ ರೋಶ್ನಾ ಜೋನ್ ಬ್ಲಾಕ್ ಗಳು ಮನಮೋಹಕವಾಗಿತ್ತು.
ಚೆನ್ನೈ ತಂಡದಲ್ಲಿ ಬಹುತೇಕ ಸರ್ವಾಂಗೀಣ ಆಟ ಪ್ರದರ್ಶಿಸಿದ ಸೋಯಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ಚೆನ್ನೈ ತಂಡದಲ್ಲೂ ಬಹುತೇಕ ಕೇರಳದ ಆಟಗಾರರೇ ಇದ್ದುದರಿಂದ ಅಕ್ಷರಶಃ ಕೇರಳೀಯರ ನಡುವೆಯೇ ಸ್ಪರ್ಧೆ ನಡೆದಂತಾಗಿತ್ತು. ಕೇರಳ ತಂಡಕ್ಕೆ ಪ್ರೇಕ್ಷಕರ ಭಾರೀ ಬೆಂಬಲವೂ ಸಾಥ್ ನೀಡಿತು.