ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ನೋಡಲು ಬಂದ ಅಪಾರ ಪ್ರೇಕ್ಷಕರು
ವರುಣನ ಭೀತಿಯ ನಡುವೆಯೂ ಇಂದು ಐದು ಪಂದ್ಯಗಳು
ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಶನ್, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಮತ್ತು ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ಸಂಘಟನಾ ಸಮಿತಿ ಆಶ್ರಯದಲ್ಲಿ ಐದು ದಿನಗಳ ಕಾಲ ನಡೆಯಲಿರುವ ಆಹ್ವಾನಿತ ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ಶಿಪ್ ಸುಳ್ಯದಲ್ಲಿ ನಿನ್ನೆಯಿಂದ ಆರಂಭಗೊಂಡಿದೆ.
ನಿರಂತರ ಮಳೆಯ ಪರಿಣಾಮ ಒದ್ದೆಯಾಗಿದ್ದ ಕ್ರೀಡಾಂಗಣವನ್ನು ಸಂಘಟಕರು ಆಟಕ್ಕೆ ಸಜ್ಜುಗೊಳಿಸಿದ ನಂತರ ಮೊದಲ ದಿನದ ಪಂದ್ಯಗಳು ನಡೆಯಿತು.
ಸಂಜೆಯ ವೇಳೆಗೆ ಮಳೆಯ ಹಿನ್ನೆಲೆಯಲ್ಲಿ ಪ್ರೇಕ್ಷಕರ ಸಂಖ್ಯೆ ವಿರಳವಾಗಿತ್ತು. ಗ್ಯಾಲರಿ ಖಾಲಿ ಹೊಡೆಯುತ್ತಿತ್ತು. ಆದರೆ ಪಂದ್ಯಾಟ ಶುರುವಾಗುತ್ತಿದ್ದಂತೆ ಕ್ರೀಡಾ ಪ್ರೇಕ್ಷಕರ ದಂಡೇ ಹರಿದುಬಂತು. ಕ್ಷಣ ಮಾತ್ರದಲ್ಲಿ ಗ್ಯಾಲರಿ ಭರ್ತಿಯಾಯಿತು. ನಿನ್ನೆಯ ದಿನ ಉಚಿತ ಪ್ರವೇಶದ ಗಿಫ್ಟ್ ಕೂಡಾ ಸಂಘಟನಾ ಸಮಿತಿ ನೀಡಿತ್ತು. ಇಂದಿನಿಂದ ಟಿಕೆಟ್ ಪಡೆದು ಆಟ ನೋಡಬೇಕಾಗಿದೆ.
ನಿನ್ನೆ ನಡೆದ ಮಹಿಳೆಯರ ಮೊದಲ ಪಂದ್ಯದಲ್ಲಿ ಕೇರಳ ಪೊಲೀಸ್ ತಂಡವು ಚೆನ್ನೈ ಐ.ಸಿ.ಎಫ್.ತಂಡವನ್ನು 25 – 21, 25- 23, 25 – 19 ನೇರ ಸೆಟ್ ಗಳಲ್ಲಿ ಮಣಿಸಿತು.
ಕರ್ನಾಟಕ ಕ್ಲಬ್ ಮತ್ತು ಎಸ್.ಆರ್.ಎಂ. ಯುನಿವರ್ಸಿಟಿ ತಂಡಗಳ ನಡುವೆ ನಡೆದ ಮಹಿಳೆಯರ ಎರಡನೇ ಪಂದ್ಯಾಟ ನಾಲ್ಕು ಸೆಟ್ ವರೆಗೆ ಮುಂದುವತಿಯಿತು. ಮೊದಲ ಸೆಟ್ ಸೋತ ಎಸ್.ಆರ್.ಎಂ. ನಂತರದ ಮೂರೂ ಸೆಟ್ ಗೆದ್ದು ಬೀಗಿತು. ಸ್ಕೋರ್ 17 – 25, 25 -16, 25 -18, 25- 21.
ಪುರುಷರ ವಿಭಾಗದ ಮೊದಲ ಪಂದ್ಯದಲ್ಲಿ ಕೇರಳ ಕೆ.ಎಸ್.ಇ.ಬಿ. ತಂಡವು ಬಲಿಷ್ಠ ಐ.ಒ.ಬಿ. ತಂಡವನ್ನು 25 – 20, 25- 14, 25 -15 ನೇರ ಸೆಟ್ ಗಳಲ್ಲಿ ಪರಾಭವಗೊಳಿಸಿ ಶುಭಾರಂಭ ಮಾಡಿತು.
ಪಂದ್ಯಾಟದ ಎರಡನೇ ದಿನವಾದ ಇಂದು ಐದು ಪಂದ್ಯಗಳು ನಡೆಯಲಿವೆ. ಪುರುಷರ ಎರಡನೇ ಪಂದ್ಯದಲ್ಲಿ ಎಸ್.ಆರ್.ಎಂ. ಯುನಿವರ್ಸಿಟಿ ಮತ್ತು ಕರ್ನಾಟಕ ಪೋಸ್ಟಲ್ ತಂಡಗಳು ಮುಖಾಮುಖಿಯಾಗಲಿದೆ. ಮಹಿಳೆಯರ ಮೂರನೇ ಪಂದ್ಯದಲ್ಲಿ ಕರ್ನಾಟಕ ಕ್ಲಬ್ ಮತ್ತು ಚೆನ್ನೈ ಐ.ಸಿ.ಎಫ್. ಸೆಣಸಲಿದೆ. ಮಹಿಳೆಯರ ನಾಲ್ಕನೇ ಪಂದ್ಯದಲ್ಲಿ ಎಸ್.ಆರ್.ಎಂ. ಯುನಿವರ್ಸಿಟಿ ಮತ್ತು ಕೇರಳ ಪೊಲೀಸ್ ಎದುರಾಳಿಯಾಗಲಿದೆ.
ಪುರುಷರ ಮೂರನೇ ಪಂದ್ಯಾಟದಲ್ಲಿ ಯುನೈಟೆಡ್ ಇಂಡಿಯಾ ಸ್ಪೈಕರ್ಸ್ ಮತ್ತು ಕೇರಳ ಕೆ.ಎಸ್.ಇ.ಬಿ. ಮುಖಾಮುಖಿಯಾಗಲಿದೆ. ಪುರುಷರ ನಾಲ್ಕನೇ ಪಂದ್ಯಾಟದಲ್ಲಿ ಬಿಪಿಸಿಎಲ್ ಕೊಚ್ಚಿನ್ ಮತ್ತು ಕರ್ನಾಟಕ ಪೋಸ್ಟಲ್ ತಂಡಗಳು ಪರಸ್ಪರ ಸ್ಪರ್ಧಿಸಲಿದೆ.
ಇಂದು ಕೂಡಾ ಪಂದ್ಯಾಟಕ್ಕೆ ವರುಣನ ಭೀತಿ ಎದುರಾಗಿದೆ. ಇಂದು ಮುಂಜಾನೆಯೇ ಮಳೆ ಸುರಿದಿದೆ. ಆದರೆ ಮಳೆಯ ನಡುವೆಯೂ ಜನರಲ್ಲಿ ವಾಲಿಬಾಲ್ ಉತ್ಸಾಹ ಮಾತ್ರ ಕುಂದಿಲ್ಲ. ಒದ್ದೆಯಾದ ಕ್ರೀಡಾಂಗಣವನ್ನು ಸಕಾಲದಲ್ಲಿ ಒಣಗಿಸಿ ಆಟಕ್ಕೆ ಸಿದ್ಧಪಡಿಸುವ ಸಂಘಟಕರ ಶ್ರಮ ಎದ್ದು ಕಾಣುತ್ತಿದೆ.