ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಅಭಿವೃದ್ಧಿ : ಎಸ್.ಅಂಗಾರ
ಕಳೆದ 75 ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕಾಣದ ಬದಲಾವಣೆ ಕಳೆದ ಎರಡು ವರ್ಷದಲ್ಲಿ ಆಗಿದೆ. ರಾಜ್ಯ ಹಾಗೂ ಕೇಂದ್ರದ ಸರಕಾರದ ನಿರ್ದೇಶನದಲ್ಲಿ ದೇಶದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಅಭಿವೃದ್ಧಿ ಪೂರಕ ಬದಲಾವಣೆ ನಡೆದಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.
ಅವರು ಮೇ. ೪ರಂದು ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವಠಾರದಲ್ಲಿ ದ.ಕ.ಜಿಲ್ಲಾಡಳಿತ, ಜಿ.ಪಂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಇಂಜಿನಿಯರ್ ವಿಭಾಗ ಮಂಗಳೂರು, ಗ್ರಾ.ಪಂ. ಬೆಳ್ಳಾರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ, ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮ ದ.ಕ. ಜಿಲ್ಲೆ ಆಶ್ರಯದಲ್ಲಿ ಎಂಡೋ ಪಾಲನಾ ಕೇಂದ್ರದ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಎಂಡೋ ಸಂತ್ರಸ್ತರ ಬೇಡಿಕೆಗಳನ್ನು ಸರಕಾರ ಪೊರೈಸುವ ಕಾರ್ಯ ನಡೆಸುತ್ತಿದೆ. ಅದರಂತೆ ಪಾಲನಾ ಕೇಂದ್ರ ಆರಂಭವಾಗುತ್ತಿದೆ. ಇಲ್ಲಿ ಆರಂಭವಾಗಲಿರುವ ಕೇಂದ್ರ ಎಂಡೋ ಸಂತ್ರಸ್ತರಿಗೆ ಪೂರಕವಾಗಲಿದ್ದು, ಎಂಡೋ ಪೀಡಿತರಿಗೆ ಚಿಕಿತ್ಸೆ, ತರಬೇತಿ ಸೇರಿದಂತೆ ಅವರ ಬೆಳವಣಿಗೆ ಪೂರಕವಾಗಿ ಪಾಲನ ಕೇಂದ್ರ ಕಾರ್ಯಚರಿಸಲಿದೆ ಎಂದರು.
ವೈದ್ಯರ ಕೊರತೆಗೆ ಶಾಶ್ವತ ಪರಿಹಾರ
ಈಗಾಗಲೇ ಸುಳ್ಯ ತಾಲೂಕಿನ ಬೆಳ್ಳಾರೆ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲಾಗಿದೆ. ಮುಂದಕ್ಕೆ ಇಲ್ಲಿಗೆ ಅವಶ್ಯಕ ಸೌಕರ್ಯ ಒದಗಿಸುವ ಕಾರ್ಯ ನಡೆಯಲಿದೆ. ದೇಶದಲ್ಲಿ, ರಾಜ್ಯದಲ್ಲಿ ಕಂಡುಬರುತ್ತಿರುವ ವೈದ್ಯರ ಕೊರತೆಯನ್ನು ಶಾಶ್ವತವಾಗಿ ಬಗೆಹರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗಮನಕೊಡುತ್ತಿವೆ ಎಂದರು.
ಎಂಡೋಲ್ ಮೆಂಟ್ ಜಿಲ್ಲಾ ನೋಡೆಲ್ ಅಧಿಕಾರಿ ನವೀನ್ ಮಾತನಾಡಿ, ಇಲ್ಲಿ ಎಂಡೋ ಪಾಲನ ಕೇಂದ್ರ ಸ್ಥಾಪನೆಗೆ ಸರಕಾರ ಮುಂದಾಗಿದೆ. ಇಲ್ಲಿನ ನಿವಾಸಿಗಳಿಗೆ ಮಾತ್ರವೇ ಇಲ್ಲಿ ಅವಕಾಶವಿದ್ದು, ಎಂಡೊ ಪೀಡಿತ ಮಕ್ಕಳನ್ನು ಇಲ್ಲಿಗೆ ಕಳಿಸುವ ಕಾರ್ಯವನ್ನು ಮನೆಯವರು ಮಾಡಬೇಕು ಎಂದ ಅವರು ಈಗಲೂ ಎಂಡೋ ಸಂತ್ರಸ್ತರನ್ನು ಗುರುತಿಸುವ ಕಾರ್ಯ ನಡೆಸಲಾಗುತ್ತಿದೆ ಎಂದ ಅವರು ೬೨ ಲಕ್ಷ ವೆಚ್ಚದಲ್ಲಿ ಪಾಲನಾ ಕೇಂದ್ರ ನಿರ್ಮಾಣವಾಗಲಿದೆ ಎಂದರು.
ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮೀ, ಸಿಡಿಪಿಒ ರಶ್ಮಿ, ಬೆಳ್ಳಾರೆ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಗಿರೀಶ್, ಇಂಜಿನಿಯರ್ ರಾಜೇಶ್, ಬೆಳ್ಳಾರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಗೌರಿ ನೆಟ್ಟಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಬೆಳ್ಳಾರೆ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಾಸುದೇವ ನಾಯಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.