ಚೆನ್ನೈ ಐ.ಸಿ.ಎಫ್. ಅಬ್ಬರಕ್ಕೆ ಕರ್ನಾಟಕ ಕ್ಲಬ್ ಶರಣು
ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಶನ್, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಮತ್ತು ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ಸಂಘಟನಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಐದು ದಿನಗಳ ಆಹ್ವಾನಿತ ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ಶಿಪ್ ನ ಎರಡನೇ ದಿನ ಮಳೆ ನಿಂತ ಮೇಲೆ ನಡೆದ ಮಹಿಳೆಯರ ಹೈ ವೋಲ್ಟೇಜ್ ಪಂದ್ಯದಲ್ಲಿ ಚೆನ್ನೈ ಐ.ಸಿ.ಎಫ್. ತಂಡವು ಕರ್ನಾಟಕ ಕ್ಲಬ್ ತಂಡವನ್ನು ಸೋಲಿಸಿದೆ.
ಇತ್ತಂಡಗಳಿಗೂ ಇದು ಎರಡನೇ ಪಂದ್ಯವಾಗಿದ್ದು, ಎರಡೂ ತಂಡಗಳು ತಮ್ಮ ಮೊದಲ ಪಂದ್ಯದಲ್ಲಿ ಸೋಲು ಕಂಡವುಗಳಾಗಿತ್ತು. ನಿತ್ಯ ಪಿ.ಎಚ್. ಸಾರಥ್ಯದಲ್ಲಿ ಕರ್ನಾಟಕ ಹಾಗೂ ಸ್ವಾತಿ ಶಾಜಿ ನೇತೃತ್ವದಲ್ಲಿ ಚೆನ್ನೈ ತಂಡ ಅಖಾಡಕ್ಕಿಳಿದಿತ್ತು. ಮೊದಲ ಸೆಟ್ ನ್ನು ಕಳೆದುಕೊಂಡ ಚೆನ್ನೈ ತಂಡವು ಉಳಿದ ಮೂರು ಸೆಟ್ ಗಳಲ್ಲಿ ಕರ್ನಾಟಕ ತಂಡವನ್ನು ಮಣಿಸುವ ಮೂಲಕ 3 – 1 ಅಂತರದ ಜಯ ದಾಖಲಿಸಿತು. ಚೆನ್ನೈಗೆ ಇದು ಗೆಲುವಾದರೆ, ಕರ್ನಾಟಕ ಕ್ಲಬ್ ಗೆ ಎರಡನೇ ಸೋಲು.
ಸಮಬಲದಲ್ಲಿ ಸಾಗಿದ ಮೊದಲ ಸೆಟ್ ನ್ನು ಅಂತಿಮವಾಗಿ 25 – 23 ಅಂಕಗಳಲ್ಲಿ ಗೆದ್ದುಕೊಂಡ ಕರ್ನಾಟಕ ಎರಡನೇ ಸೆಟ್ ನಲ್ಲಿ ಚೆನ್ನೈಗೆ ತಲೆ ಬಾಗಿತು. ಪಂದ್ಯದ ಆರಂಭದಿಂದಲೇ ಸ್ಪಷ್ಟ ಮೇಧಾವಿತ್ವ ಸ್ಥಾಪಿಸಿದ ಚೆನ್ನೈ ತಂಡದ ವಿರುದ್ಧ ಕೊನೆ ಕ್ಷಣದಲ್ಲಿ ತಿರುಗಿ ಬೀಳುವ ಲಕ್ಷಣ ತೋರಿದರೂ ಚೆನ್ನೈ ಅದಕ್ಕೆ ಅವಕಾಶ ನೀಡಲಿಲ್ಲ. 25 – 19 ಅಂತರದಲ್ಲಿ ಚೆನ್ನೈ ಮೇಲುಗೈ ಸಾಧಿಸಿತು.
ಎರಡನೇ ಸೆಟ್ ನ ಸಂಘಟಿತ ಆಟವನ್ನು ಮೂರನೇ ಸೆಟ್ ನಲ್ಲು ಮುಂದುವರಿಸಿದ ಚೆನ್ನೈ 25 – 16 ಅಂತರದಲ್ಲಿ ಅಧಿಕಾರಯುತ ಜಯ ದಾಖಲಿಸಿದರು. ನಾಲ್ಕನೇ ಸುತ್ತಿನಲ್ಲಿ 25 – 11 ಅಂತರದ ಜಯ ಪಡೆಯಿತು.
ಪ್ರಥಮ ಪಂದ್ಯದಲ್ಲಿ ತನ್ನ ಸರ್ವಾಂಗೀಣ ಆಟದಿಂದ ಗಮನ ಸೆಳೆದಿದ್ದ ಸೋಯಾ ಈ ಪಂದ್ಯದಲ್ಲೂ ಅತ್ಯುತ್ತಮ ಪ್ರದರ್ಶನ ತೋರಿದರು.