ಜಾಲ್ಸೂರು ಗ್ರಾಮದ ಕುಕ್ಕನ್ನೂರು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದಲ್ಲಿ ಶ್ರೀ ಕಿನ್ನಿಮಾಣಿ ಪೂಮಾಣಿ ದೈವಗಳ ಕಾಲಾವಧಿ ಜಾತ್ರೋತ್ಸವವು ಮೇ.2ರಿಂದ ಮೇ. 6ರವರೆಗೆ ಜರುಗಿತು.
ಮೇ.2ರಂದು ಪೂರ್ವಾಹ್ನ 10ಕ್ಕೆ ಮುಂಡ್ಯೆಗೆ ಶೃಂಗಾರ, ರಾತ್ರಿ 8ಕ್ಕೆ ದೇವರ ಪೂಜೆ ಜರುಗಿತು. ಮೇ.3ರಂದು ಪೂರ್ವಾಹ್ನ 7ಕ್ಕೆ ಗಣಪತಿ ಹೋಮ, ಪೂರ್ವಾಹ್ನ 10ಕ್ಕೆ ಧ್ವಜಾರೋಹಣ, ರಾತ್ರಿ 8ಕ್ಕೆ ಸಂಕ್ರಮಣ ವಾಲಸಿರಿ ಕೊಡಿಬಂಡಿ ಉತ್ಸವ ನಡೆಯಿತು.
ಮೇ.4ರಂದು ಪೂರ್ವಾಹ್ನ 9ರಿಂದ ಪುರೋಹಿತ ಸುಬ್ರಹ್ಮಣ್ಯ ಭಟ್ ಶಾಂತಿನಗರ ಅವರ ನೇತೃತ್ವದಲ್ಲಿ ಕಟ್ಟಮುಚ್ಚಿರು ಮಾಡದ ಬಳಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು. ಮೇ.5ರಂದು ಬೆಳಿಗ್ಗೆ 3ರಿಂದ ನಡುಬಂಡಿ ಉತ್ಸವ, ಸಿಡಿಮದ್ದು ಪ್ರದರ್ಶನವು ನಡೆಯಿತು. ಆದರೆ ಈ ವೇಳೆ ಸುರಿದ ಭಾರೀ ಗಾಳಿ ಮಳೆಯ ಮಧ್ಯೆಯೂ ಉತ್ಸವವು ಭಕ್ತಾದಿಗಳ ಸಮ್ಮುಖದಲ್ಲಿ ಸಾಂಗವಾಗಿ ನೆರವೇರಿತು.
ಬೆಳಿಗ್ಗೆ 6ಕ್ಕೆ ಕಿರಿಯರ ನೇಮ, ಬೆಳಿಗ್ಗೆ 9ಕ್ಕೆ ನಾಯರ್ ನೇಮ, ಹರಿಕೆ, ಕಾಣಿಕೆ ಸ್ವೀಕಾರ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು. ರಾತ್ರಿ 8ರಿಂದ ಸಂಕ್ರಮಣ ಪೂಜೆ, ಸಮಾರಾಧನೆ ನಡೆಯಿತು.
ಮೇ.6ರಂದು ಬೆಳಿಗ್ಗೆ 7ಕ್ಕೆ ವಾಲಸಿರಿ ಕಡೆಬಂಡಿ ಉತ್ಸವ, ಹಿರಿಯರ ನೇಮ, ಹರಿಕೆ ಕಾಣಿಕೆ ಸ್ವೀಕಾರ, ಆರಾಟ, ಧ್ವಜಾವರೋಹಣ, ಅಂಬುಕಾಯಿ, ಹಣ್ಣುಕಾಯಿ ನಡೆಯಿತು.
ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ಬಾಲಕೃಷ್ಣ ಗೌಡ ನಡುಬೆಟ್ಟು, ಪ್ರಧಾನ ಅರ್ಚಕ ಸುಭಾಷ್ ರೈ ಕುಕ್ಕಂದೂರು, ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರುಗಳು, ಕುಕ್ಕನ್ನೂರು ಹದಿನಾರು ಒಕ್ಕಲು ಮತ್ತು ಸೋಣಂಗೇರಿ ಹತ್ತು ಒಕ್ಕಲಿನ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.