ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ನಲ್ಲಿ ಅನುಭವಿಗಳೆದುರು ಯುವ ಪ್ರತಿಭೆಗಳ ಪ್ರಯಾಸದ ಗೆಲುವು
ಗಾಯಾಳುಗಳ ಸಮಸ್ಯೆಯಲ್ಲಿ ಗೆಲುವಿನ ದಡ ಸೇರಲು ವಿಫಲವಾದ ಬಿಪಿಸಿಎಲ್
ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಶನ್, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಮತ್ತು ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ಸಂಘಟನಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಐದು ದಿನಗಳ ಆಹ್ವಾನಿತ ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ಶಿಪ್ ನ ಮೂರನೇ ದಿನದ ಮೊದಲ ಪಂದ್ಯದಲ್ಲಿ ಬಿ.ಪಿ.ಸಿ.ಎಲ್. ಕೊಚ್ಚಿನ್ ತಂಡವು ಚೆನ್ನೈ ಎಸ್.ಆರ್.ಎಂ. ಯುನಿವರ್ಸಿಟಿ ತಂಡಕ್ಕೆ ಶರಣಾಗಿದೆ. ಎಸ್.ಆರ್.ಎಂ. ತಂಡ 3 – 2 ಸೆಟ್ ಗಳಿಂದ ಬಿಪಿಸಿಎಲ್ ತಂಡವನ್ನು ಸೋಲಿಸಿತು.
ಪ್ರತಿಭಾ ಸಂಪನ್ನರ ತಂಡವಾಗಿದ್ದ ಬಿ.ಪಿ.ಸಿ.ಎಲ್. ತಂಡವು ಭಾರತ ವಾಲಿಬಾಲ್ ತಂಡದ ಮಾಜಿ ಸದಸ್ಯ, 14 ವರ್ಷಗಳ ಕಾಲ ಭಾರತಕ್ಕಾಗಿ ಆಡಿದ ಟೋಮ್ ಜೋಸೆಫ್ ಗರಡಿಯಲ್ಲಿ ಪಳಗಿತ್ತು. ಭಾರತ ತಂಡದ ಸದಸ್ಯ, ಏಶಿಯನ್ ಗೇಮ್ಸ್ ಪ್ರತಿನಿಧಿಸಿದ್ದ ಅಖಿನ್ ಜಾಸ್ ಸಾರಥ್ಯದಲ್ಲಿ ಅನುಭವಿಗಳು ಬಿಪಿಸಿಎಲ್ ಕಣಕ್ಕಿಳಿದಿದ್ದರೆ, ಇತ್ತೀಚೆಗಷ್ಟೆ ಖೇಲೋ ಇಂಡಿಯಾ ಚಾಂಪಿಯನ್ ಶಿಪ್ ಗೆದ್ದುಕೊಂಡಿದ್ದ ಯುವ ಪ್ರತಿಭೆಗಳ ಎಸ್.ಆರ್. ಎಂ. ತಂಡ ಸಂತೋಷ್ ಸಾರಥ್ಯದಲ್ಲಿ ಮೈದಾನಕ್ಕಿಳಿದಿತ್ತು.
ಸಮಬಲದಿಂದಲೇ ಸಾಗಿದ ಮೊದಲ ಸೆಟ್ ನಲ್ಲಿ ಅನುಭವಿಗಳೆದುರು ಅತ್ಯಂತ ಆತ್ಮ ವಿಶ್ವಾಸ ದಿಂದಲೇ ಆಡಿದ ಎಸ್.ಆರ್.ಎಂ. ಆಟಗಾರರು ಆಟದ ಪ್ರತಿಹಂತದಲ್ಲೂ ಅಧಿಪತ್ಯ ಸ್ಥಾಪಿಸಿತ್ತು. ಆದರೆ ಈ ಮಧ್ಯೆ ಎರಡು ಮೂರು ಸರ್ವಿಸ್ ಎರರ್ ಗಳು ಮುಳುವಾಗಿ ಬಿಪಿಸಿಎಲ್ ಅಂಕ ವೃದ್ಧಿಸಿತು. ಈ ಮಧ್ಯೆ ಬಿಪಿಸಿಎಲ್ ಕೀ ಪ್ಲೇಯರ್ ಮುತ್ತುಸ್ವಾಮಿ ಗಾಯಗೊಂಡು ಮೈದಾನ ಬಿಡಬೇಕಾಗಿ ಬಂದದ್ದು ಅನುಭವಿಗಳಿಗೆ ಹಿನ್ನಡೆಯಾಯಿತು. ಬಿಪಿಸಿಎಲ್ ಪರವಾಗಿ ಕಪ್ತಾನ ಅಖಿನ್ ಜಿ.ಎಸ್. ಸ್ಮಾಶ್ , ಬ್ಲಾಕ್ ಗಳ ಮೂಲಕ ಶ್ರೇಷ್ಠ ನಿರ್ವಹಣೆ ತೋರಿದರೆ, ಜೆರೋಮ್ ವಿನೀತ್ ಸ್ಮಾಶ್ ಹಿಡಿದು ನಿಲ್ಲಿಸಿತು. ಎಸ್.ಆರ್.ಎಂ. ತಂಡದ ಮುನ್ನಡೆಯ ಕ್ರೆಡಿಟ್ ಪೂರ್ಣ ನಾಯಕ ಸಂತೋಷ್ ಗೇ ಸಲ್ಲಬೇಕು. ಕಳೆದೆರಡು ದಿನಗಳಿಂದ ಪ್ರೇಕ್ಷಕರ ಮನಸೂರೆಗೊಂಡ ಸಂತೋಷ್ ಆಟ ಇಂದು ಕೂಡಾ ಸಂತೋಷ ತಂದುಕೊಟ್ಟರು. ತುಷಾರ್ ಲೆವಾರೆ ಸ್ಮಾಶ್ ಗಳ ಮೂಲಕ ಮಿಂಚಿದರೆ, ವಿಮಲ್ ರಾಜ್ ಅದ್ಭುತ ಪ್ಲೇಸಿಂಗ್ ಮೂಲಕ ಅಂಕ ತಂದುಕೊಟ್ಟರು.
ಸೆಟ್ ಪಾಯಿಂಟ್ ನಲ್ಲಿ ತಪ್ಪು ಮಾಡದ ಎಸ್.ಆರ್.ಎಂ. ವಿಜಯವನ್ನು ತನ್ನತ್ತ ತಿರುಗಿಸಿತು. ಅಂತಿಮವಾಗಿ ಅಂಕ 25- 23.
ಮೊದಲ ಸೆಟ್ ನ ಹಿನ್ನಡೆಯನ್ನು ಗಂಭೀರವಾಗಿ ತೆಗೆದುಕೊಂಡ ಬಿ.ಪಿ.ಸಿ.ಎಲ್. ಆಕ್ರಮಣಕಾರಿ ಪ್ರತ್ಯುತ್ತರಕ್ಕೆ ಮುಂದಾಯಿತು. ಆದರೆ ಎಸ್.ಆರ್.ಎಂ. ಹುಡುಗರು ಬಿಟ್ಟು ಕೊಡಲಿಲ್ಲ. ಕನ್ನಡದ ಹುಡುಗ ಸೃಜನ್ ಶೆಟ್ಟಿ ಸರ್ವ್ ಗಮನ ಸೆಳೆಯಿತು. ಮತ್ತೆ ಪಾಯಿಂಟ್ ಗಳ ತೂಗುಯ್ಯಾಲೆ. ಜೆರೋಮ್ ವಿನೀತ್, ಜಾರ್ಜ್ ಅವರ ಭರ್ಜರಿ ಸ್ಮಾಶ್ ಗಳ ಮೂಲಕ ಲೀಡ್ ಪಡೆಯಿತು. ಎಸ್.ಆರ್.ಎಂ. ತಂಡಗಳ ಆಟಗಾರರ ಸ್ಮಾಶ್ ಗಳಿಗೆ ನೀಳ ಕಾಯದ ಅಖಿನ್ ಕೈಗಳು ತಡೆಗೋಡೆಯಾಯಿತು. ಪರಿಣಾಮ 22 – 17 ಅಂಕಗಳ ಕಂಫರ್ಟ್ ಝೋನ್ ಗೆ ಬಂದರು. 25 – 17 ಕ್ಕೆ ಬಿಪಿಸಿಎಲ್ ಪರವಾಗಿ ಮ್ಯಾಚ್ ಫಿನಿಶ್.
ಮೂರನೇ ಸೆಟ್ ಇತ್ತಂಡಗಳಿಗೂ ಸವಾಲಾಗಿತ್ತು. ಪರಿಣಾಮ ಚೆಂಡು ನೆಲ ಸ್ಪರ್ಶಿಸಲು ಸಮಯವೇ ಹಿಡಿಯಿತು. 7 – 11 ಹಿನ್ನಡೆಯಲ್ಲಿದ್ದ ಬಿಪಿಸಿಎಲ್ ಗೆ ಮತ್ತೊಂದು ಆಘಾತ ಕಾದಿತ್ತು. ತಡಗೋಡೆಯಾಗಿದ್ದ ನಾಯಕ ಅಖಿನ್ ನೆಲಕ್ಕೆ ಕುಸಿದರು. ಎಲ್ಬೋ ಸಮಸ್ಯೆಯಿಂದ ಎರಡನೆಯವರಾಗಿ ಮೈದಾನ ಬಿಡಬೇಕಾಗಿಬಂತು. ಹೆಚ್ಚುವರಿ ಆಟಗಾರರಿಲ್ಲದಿರುವುದು ತಂಡಕ್ಕೆ ಮತ್ತೊಂದು ಸವಾಲಾಯಿತು. ಆಟ ಮುಂದುವರಿದರೂ ಹಳೆಯ ಲಯಕ್ಕೆ ಮರಳಲು ಪ್ರಯಾಸಪಟ್ಟರು. ಅಖಿನ್ ಆಟದ ಜವಾಬ್ದಾರಿ ತೆಗೆದುಕೊಂಡ ಜೆರೋಮ್, ಸೇತು, ಜಾರ್ಜ್ ಮೊದಲಾದ ಆಟಗಾರರು ಅಂಕ ಗಳಿಕೆ ಹೆಚ್ಚಿಸಿದರು. ಸರ್ವಿಸ್ ಪಾಯಿಂಟ್ ಗಳು ವರದಾನವಾಯಿತು. ಆದರೂ ಗೆಲುವಿನ ದಡ ತಲುಪದ ಬಿಪಿಸಿಎಲ್
23 – 25 ಅಂಕಗಳ ಅಂತರದ ಹಿನ್ನಡೆ ಕಂಡಿತು.
ನಾಲ್ಕನೇ ಸೆಟ್ ಮತ್ತೆ ಸಮಬಲದೊಂದಿಗೆ ಶುರು. ಬಿಪಿಸಿಎಲ್ ಪರವಾಗಿ ಜೆರೋಮ್ ಶಕ್ತಿಯುತ ಸ್ಮಾಶ್ ಗಳ ಮೂಲಕ ತೋರಿದರು. .ಆರ್.ಎಂ.ಪರವಾಗಿ ಕನ್ನಡಿಗ ಸೃಜನ್ ಶೆಟ್ಟಿ ಸ್ಮಾಶ್ ಗಳು ಗಮನಾರ್ಹವಾಗಿತ್ತು. ನಿರ್ಣಾಯಕ ಘಟ್ಟದಲ್ಲಿ ಅಂಕ ಪೇರಿಸುತ್ತಾ ಹೋದ ಬಿಪಿಸಿಎಲ್ ಗೆಲುವಿನ ಗುರಿಯನ್ನು ತನ್ನತ್ತ ತಿರುಗಿಸಿ 25 – 22 ಅಂಕದೊಂದಿಗೆ ಪಂದ್ಯ ಮುಗಿಸಿತು.
ಅಂತಿಮ ಸೆಟ್ ಕೂಡಾ ಕುತೂಹಲದಿಂದಲೇ ನಡೆದರೂ ಪ್ರಬಲ ಹೋರಾಟ ನೀಡಿದ ಎಸ್.ಆರ್.ಎಂ. 15 – 8 ಅಂಕಗಳ ಅಂತರದ ವಿಜಯ ಸಾಧಿಸಿ ಪಂದ್ಯ ಮುಗಿಸಿತು. ಆಟದುದ್ದಕ್ಕೂ ಸರ್ವಾಂಗೀಣ ಪ್ರದರ್ಶನ ತೋರಿದ ಕಪ್ತಾನ ಸಂತೋಷ್ ಮೂಲಕವೇ ಎಸ್.ಆರ್.ಎಂ.ಗೆ ಗೆಲುವಿನ ಅಂಕ ಬಂತು.
ಕಳೆದರಡು ದಿನಗಳಿಂದ ವರುಣನ ಅವಕೃಪೆಗೊಳಗಾಗಿದ್ದ ಪಂದ್ಯಗಳು ಇಂದು ನಿರಾಯಾಸವಾಗಿ ನಡೆಯಿತು