ಪ್ರಬಲ ತಂಡಗಳ ಬಿರುಸಿನ ಪಂದ್ಯದಲ್ಲಿ ಯುನೈಟೆಡ್ ಸ್ಪೈಕರ್ಸ್ಗೆ ಗೆಲುವು: ಟೂರ್ನಿಯಿಂದ ಹೊರಬಿದ್ದ ಐಒಬಿ
ರಾಷ್ಟ್ರೀಯ ವಾಲಿಬಾಲ್ ಪಂದ್ಯದಲ್ಲಿ ಪ್ರಬಲ ತಂಡಗಳಾದ ಯುನೈಟೆಡ್ ಸ್ಪೈಕರ್ಸ್ ಇಂಡಿಯಾ ಗುಜರಾತ್ ತಂಡ ಮತ್ತು ಐಒಬಿ ತಂಡಗಳ ಮಧ್ಯೆ ಶುಕ್ರವಾರ ರಾತ್ರಿ ನಡೆದ ಪುರುಷ ವಿಭಾಗದ ಕೊನೆಯ ಲೀಗ್ ಪಂದ್ಯದಲ್ಲಿ ಸ್ಪೈಕರ್ಸ್ ತಂಡಕ್ಕೆ ಗೆಲುವು. ಈ ಗೆಲುವಿನೊಂದಿಗೆ ಆಡಿದ ಎರಡೂ ಲೀಗ್ ಪಂದ್ಯ ಗೆದ್ದ ಸ್ಪೈಕರ್ಸ್ ಸೆಮಿ ಫೈನಲ್ಗೆ ಲಗ್ಗೆಯಿಟ್ಟಿತು. ಭಾರತ ತಂಡದ ಮಾಜಿ ಕಪ್ತಾನ, ಅಂತಾರಾಷ್ಟ್ರೀಯ ಸ್ಟಾರ್ ಸೆಟ್ಟರ್ ಉಕ್ರ ಪಾಂಡ್ಯನ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಆಟಗಾರರನ್ನು ಒಳಗೊಂಡ ಐಒಬಿ ಆಡಿದ ಎರಡೂ ಪಂದ್ಯದಲ್ಲಿ ಸೋಲನುಭವಿಸಿ ಟೂರ್ನಿಯಿಂದ ಹೊರ ಬಿತ್ತು. ಕೊನೆಯ ಲೀಗ್ ಪಂದ್ಯ ತುಂಬಿದ ಗ್ಯಾಲರಿಯಲ್ಲಿ ನೆರೆದ ಪ್ರೇಕ್ಷಕರಿಗೆ ಅಕ್ಷರಷಃ ಕ್ರೀಡಾ ರಸದೌತಣ ಉಣ ಬಡಿಸಿತು. ಐದು ಸೆಟ್ ಸಾಗಿದ ಪಂದ್ಯದಲ್ಲಿ ಸ್ಪೈಕರ್ಸ್ 3-2 ಸೆಟ್ಗಳಿಂದ ಗೆಲುವು ಸಾಧಿಸಿತು.(20-25,26-24,25-15,17-25,15-10) ಮೊದಲ ಸೆಟ್ನಲ್ಲಿ ಅದ್ಭುತ ಹೊಂದಾಣಿಕೆಯ ಮತ್ತು ಆಕ್ರಮಣಕಾರಿ ಆಟ ಪ್ರದರ್ಶಿಸಿದ ಐಒಬಿ ಚೆನ್ನೈ ತಂಡ ಮೊದಲ ಸೆಟ್ಟನ್ನು 25-20 ಅಂತರದಲ್ಲಿ ಗೆದ್ದುಕೊಂಡಿತು. ಅಂತಾರಾಷ್ಟ್ರೀಯ ಆಟಗಾರ ಉಕ್ರ ಪಾಂಡಿಯನ್ ಅತ್ಯುತ್ತಮ ಆಟ, ಶೆಲ್ಟನ್ ಮೋಸೆಸ್, ಆನಂದರಾಜ್ ಶಕ್ತಿಶಾಲಿ ಹೊಡೆತ, ಉಕ್ರಪಾಂಡ್ಯನ್ ಹಾಗು ವೈಷ್ಣವ್ ಅವರ ತಡೆ ಮೂಲಕ ಅಂಕ ಏರಿಸಿದ ಐಒಬಿ ಸೆಟ್ ಗೆದ್ದಿತು. ಎರಡನೇ ಸೆಟ್ನಲ್ಲಿ ಉಜ್ವಲ ಫಾರ್ಮ್ಗೆ ಮರಳಿದ ಯುನೈಟೆಡ್ ಸ್ಪೈಕರ್ಸ್ ಉತ್ತಮ ಹೊಡೆತಗಳ ಮೂಲಕ ಅಂಕ ಏರಿಸುತ್ತಾ ಸಾಗಿದರು. ಸ್ಪೈಕರ್ಸ್ ಪರ ರಮಣ್ ಚೌದರಿ, ಮನು ಜೋಸೆಫ್ ಆಕ್ರಮಣಕಾರಿ ಹೊಡೆತದ ಮೂಲಕ ಸ್ಕೋರ್ ಏರಿಸಿದರು. ಐಒಬಿ ತೋರಿದ ಉತ್ತಮ ಪ್ರತಿರೋಧದಿಂದ ಸಮಬಲದಲ್ಲಿ ಸಾಗಿದ ಪಂದ್ಯ ಅಂತಿಮವಾಗಿ ಸ್ಪೈಕರ್ಸ್ 26-24 ಅಂಕದಲ್ಲಿ ಸೆಟ್ ಗೆದ್ದುಕೊಂಡಿತು. ಮೂರನೇ ಸೆಟ್ನಲ್ಲಿ ರಮಣ್ ಚೌದರಿ
ಅವರ ಅದ್ಭುತ ಸ್ಮಾಶ್ಗಳು ಸ್ಪೈಕರ್ಸ್ಗೆ ಉತ್ತಮ ಮುನ್ನಡೆ ಒದಗಿಸಿತು. ಅಲ್ಪ ಹಿನ್ನಡೆ ಅನುಭವಿಸಿದ ಐಒಬಿಯನ್ನು ಹಿಂದಿಕ್ಕಿ 25-15 ಅಂತರದಲ್ಲಿ ಸ್ಪೈಕರ್ಸ್ ಸೆಟ್ ಗೆದ್ದುಕೊಂಡಿತು.ಜಾಬಿನ್ ವರ್ಗೀಸ್ ಹಾಗು ಜಿ.ಆರ್.ವೈಷ್ಣವ್ ಅವರ ಪವರ್ಪುಲ್ ಸ್ಮಾಶ್ಗೆ ಸಾಕ್ಷಿಯಾದ ನಾಲ್ಕನೇ ಸೆಟ್ನಲ್ಲಿ ಐಒಬಿ ತಂಡ ಆರಂಭದಲ್ಲೇ ಮುನ್ನಡೆ ಪಡೆದುಕೊಳ್ಳುತ್ತಾ ಸಾಗಿತ್ತು. ಉಕ್ರಪಾಂಡ್ಯನ್ ಅವರ ಆಲ್ ರೌಂಡ್, ಸಲ್ವ ಪ್ರಭು, ಕಾರ್ತಿಕ್ ಉತ್ತಮ ಆಟದ ಫಲವಾಗಿ ನಾಲ್ಕನೇ ಸೆಟ್ 25-17 ಅಂತರದಲ್ಲಿ ಗೆದ್ದುಕೊಂಡು 2-2 ಸೆಟ್ ಸಮಬಲದ ಹೋರಾಟದೊಂದಿಗೆ ಪಂದ್ಯ 5 ನೇ ಸೆಟ್ಗೆ ಪ್ರವೇಶಿಸಿತು. ಐದನೇ ಸೆಟ್ನಲ್ಲಿ ಜಿದ್ದಾ ಜಿದ್ದಿನ ಹೋರಾಟ ಕಂಡು ಬಂದರೂ ಅಂತಿಮವಾಗಿ 15-10 ಸ್ಕೋರ್ನಲ್ಲಿ ಸ್ಪೈಕರ್ಸ್ ಗೆದ್ದುಕೊಂಡಿತು.