ಬೆಳ್ಳಾರೆ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನ ವ್ಯವಸ್ಥಾಪಕರ ಮೇಲೆ ದೂರು ದಾಖಲಿಸದಿದ್ದರೆ ಮೇ.16 ರಂದು ಪ್ರತಿಭಟನೆಯ ಎಚ್ಚರಿಕೆ
ಸಬ್ಸಿಡಿ ಲೋನ್ ಮಂಜೂರು ಮಾಡಲು ಹಣ ಪಡೆದ ಬೆಳ್ಳಾರೆ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನ ವ್ಯವಸ್ಥಾಪಕರ ಮೇಲೆ ನೀಡಿರುವ ದೂರನ್ನು ಬೆಳ್ಳಾರೆ ಪೋಲೀಸರು ಇದುವರೆಗೆ ದಾಖಲಿಸಿಕೊಂಡಿಲ್ಲ. ಮೇ.16 ರೊಳಗೆ ದೂರು ದಾಖಲಿಸಿ ಹಣ ಪಡೆದ ಮ್ಯಾನೇಜರ್ ಮೇಲೆ ಕ್ರಮ ಕೈಗೊಳ್ಳದಿದ್ದರೆ ಪುತ್ತೂರು ಡಿವೈಎಸ್ ಪಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಆನಂದ ಬೆಳ್ಳಾರೆ ಹೇಳಿದರು.
ಮೇ.7 ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು
ಬೆಳ್ಳಾರೆ ಗ್ರಾಮದ ಗುರುವರವರ ಹೈನುಗಾರಿಕೆ ಮಾಡಲು ಬೆಳ್ಳಾರೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಲ್ಲಿ ಸಬ್ಸಿಡಿ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ ಆರಂಭದಲ್ಲಿ ಸಾಲ ಕೊಡಬಹುದೆಂದು ಹೇಳಿದ ಮ್ಯಾನೇಜರ್ ಬಳಿಕ 10 ಸಾವಿರದ ಬೇಡಿಕೆ ಇಟ್ಟರಲ್ಲದೆ, ಹಣ ಕೊಟ್ಟರೆ ಮಾತ್ರ ಮಂಜೂರು ಮಾಡಬಹುದೆಂದು ಹೇಳಿದರು. ಗುರುವರವರು ತಮ್ಮ ಪಿಂಚಣಿ ಹಣವನ್ನು ತೆಗೆದು ರೂ.5 ಸಾವಿರ ನೀಡಿದ್ದಾರೆ. ಹೀಗಿದ್ದೂ ಲೋನ್ ಮಂಜೂರು ಮಾಡಿಲ್ಲ. ಕೇಳಿದಾಗ ಜಾತಿ ನಿಂದನೆ ಮಾಡಿದ್ದಾರೆ. ಮ್ಯಾನೇಜರು ಗುರುವರಿಂದ ಪಡೆದ ಹಣವನ್ನೂ ವಾಪಾಸ್ ನೀಡಲಿಲ್ಲ. ಈ ಬಗ್ಗೆ ಬೆಳ್ಳಾರೆ ಪೋಲೀಸರಿಗೆ ದೂರು ನೀಡಿದರೆ ಪೋಲೀಸರು ಕೇಸು ದಾಖಲಿಸುವುದಿಲ್ಲ. ಹಿಂದಿನ ಎಸ್.ಐ. ಆಂಜನೆಯ ರೆಡ್ಡಿಯವರು ಮಾತನಾಡಿಕೊಂಡು ಮುಗಿಸಿ ಎಂದು ಹೇಳಿದ್ದಾರೆ. ದಲಿತರಿಗೆ ಅನ್ಯಾಯವಾದಾಗ ಈ ರೀತಿ ಹೇಳುವುದು ಸರಿಯಲ್ಲ. ನಾವು ಕೊಟ್ಟಿರುವ ಕೇಸು ದಾಖಲಿಸಿ ಹಣ ಪಡೆದು, ಜಾತಿ ನಿಂದನೆ ಮಾಡಿದ ಮ್ಯಾನೇಜರ್ ರ ಮೇಲೆ ಕ್ರಮ ಜರುಗಿಸಬೇಕು. ಒಂದು ವಾರದಲ್ಲಿ ಕೇಸು ದಾಖಲಿಸದಿದ್ದರೆ ನಾವು ಮೇ.16 ರಂದು ಪುತ್ತೂರು ಡಿವೈಎಸ್ ಪಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.
ಲೋನ್ ಗೆ ಅರ್ಜಿ ಸಲ್ಲಿಸಿದ್ದ ಗುರುವರವರು ಮಾತನಾಡಿ ಬ್ಯಾಂಕ್ ಮ್ಯಾನೇಜರ್ ಲೋನ್ ಪಾಸ್ ಮಾಡಲು ಹಣ ಪಡೆದುಕೊಂಡದ್ದು ಹೌದು. 5 ಸಾವಿರ ಕೊಟ್ಟಿದ್ದೇನೆ
ಆದರೂ ಲೋನ್ ಪಾಸ್ ಮಾಡದೇ ಜಾತಿ ನಿಂದನೆ ಮಾಡಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಅಚ್ಚುತ ಮಲ್ಕಜೆ, ಶೀನ ಬಾಳಿಲ, ಶಂಕರ ಬೂಡು, ಸದಾನಂದ ಬೆಟ್ಟಂಪಾಡಿ ಇದ್ದರು.