ಮಹಿಳೆಯರ ಕೊನೆಯ ಲೀಗ್ ಪಂದ್ಯದಲ್ಲಿ ಕೇರಳ ಪೊಲೀಸ್ ತಂಡಕ್ಕೆ ಶರಣಾದ ಎಸ್.ಆರ್.ಎಂ.ಚೆನ್ನೈ
ಫೈನಲ್ ಪಂದ್ಯಕ್ಕೂ ಉಭಯ ತಂಡಗಳ ತಾಲೀಮು; ಅನಾವರಣಗೊಂಡ ವಾಲಿಬಾಲ್ ಸೌಂದರ್ಯ
ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಶನ್, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಮತ್ತು ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ಸಂಘಟನಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಐದು ದಿನಗಳ ಆಹ್ವಾನಿತ ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ಶಿಪ್ ನ ನಾಲ್ಕನೇ ದಿನ ನಡೆದ ಮಹಿಳೆಯರ ವಿಭಾಗದ ಪಂದ್ಯದಲ್ಲಿ ಎಸ್.ಆರ್.ಎಂ . ಯುನಿವರ್ಸಿಟಿ ಚೆನ್ನೈ ತಂಡ ದ ವಿರುದ್ಧ ಕೇರಳ ಪೊಲೀಸ್ ತಂಡ ವಿಜಯಗಳಿಸಿತು.
ಉಭಯ ತಂಡಗಳೂ ಈಗಾಗಲೇ ಫೈನಲ್ ಪ್ರವೇಶಿಸಿರುವುದರಿಂದ ಈ ಪಂದ್ಯಕ್ಕೆ ಅಂಥ ಮಹತ್ವವೇನೂ ಇರದಿದ್ದರೂ ಫೈನಲ್ ಗೆ ಮುಂಚಿನ ತಾಲೀಮಿನಂತಿತ್ತು.
ಆದಿರಾ ರೋಯ್ ಸಾರಥ್ಯದಲ್ಲಿ ಎಸ್.ಆರ್.ಎಂ. ಮತ್ತು ಆದಿರಾ ಎಂ.ಆರ್. ಸಾರಥ್ಯದಲ್ಲಿ ಕೇರಳ ಪೊಲೀಸ್ ತಂಡ ಸೆಣಸಾಟಕ್ಕೆ ಇಳಿಯಿತು.
ಮೊದಲ ಸೆಟ್ ನ ಪೂರ್ವಾರ್ಧ ಅಷ್ಟೇನೂ ರೋಮಾಂಚನಕಾರಿಯಾಗಿರಲಿಲ್ಲ. ಆದರೆ ಉತ್ತರಾರ್ಧ ರೋಚಕ ಘಟ್ಟಕ್ಕೆ ತಲುಪಿತು.ಆರಂಭದಲ್ಲಿ ಎಸ್.ಆರ್.ಎಂ. ಪರವಾಗಿದ್ದ ಪಂದ್ಯದಲ್ಲಿ ತಂಡ 5 ಅಂಕಗಳ ಮುನ್ನಡೆಯನ್ನು ಕಾಯ್ದುಕೊಳ್ಳುತ್ತಲೇ ಬಂತು. ನಾಯಕಿ ಆದಿರಾ ರೋಯ್ ಅವರ ಸ್ಮಾಶ್ , ಅಕ್ಷಯ ಅವರ ಪ್ಲೇಸಿಂಗ್ ಅಂಕ ಗಳಿಕೆಗೆ ಸಹಾಯವಾಯಿತು. 22 – 18 ಎಂದಿದ್ದ ಸ್ಕೋರ್ ಬೋರ್ಡ್ ಬಳಿಕದಲ್ಲಿ ತಿರುಗಿತು. ನೀಳ ಕಾಯದ ರೋಶ್ನಾ ಜೋನ್ ಅವರ ಶಕ್ತಿ ಶಾಲಿ ಹೊಡೆತ ಮತ್ತು ತಂತ್ರಗಾರಿಕೆಯ ಪ್ಲೇಸಿಂಗ್ , ಲಿಬರೋ ಆರತಿಯ ಟೇಕ್, ಅನಘ, ಅಂಜುಮೋಳ್ ಅವರ ಸ್ಮಾಶ್ ಗಳಿಂದ ಪಂದ್ಯ ಕೇರಳದತ್ತ ತಿರುಗಿತು. ಇಡೀ ಪಂದ್ಯದಲ್ಲಿ ಕೇರಳ ಮುನ್ನಡೆ ಸಾಧಿಸುವಾಗ ಸ್ಕೋರ್ 26 – 25. ಕೊನೆಗೆ 27 – 25 ಅಂಕಗಳ ಅನಂತರದಲ್ಲಿ ಮ್ಯಾಚ್ ಕೇರಳ ಪರವಾಗಿ ಫಿನಿಶ್.
ಎರಡನೇ ಸೆಟ್ ಚಿತ್ರಣ ಪ್ರಥಮ ಸೆಟ್ ಗಿಂತ ತೀರಾ ಭಿನ್ನವಾಗಿತ್ತು. ಆರಂಭದಿಂದಲೇ ಕೇರಳ ಮುನ್ನಡೆ ಸಾಧಿಸಿತ್ತು. ರೋಶ್ನಾ ಜೋನ್ ಅವರ ಸರ್ವಾಂಗೀಣ ಆಟದ ನೆರವಿನಿಂದ 13 ಅಂಕದ ವರೆಗೂ ಮುನ್ನಡೆಯಲ್ಲಿದ್ದ ಕೇರಳದ ವಿರುದ್ಧ ತಿರುಗಿಬಿದ್ದ ಎಸ್.ಆರ್.ಎಂ. ಸರ್ವಾಧಿಕ ಪ್ರದರ್ಶನದೊಂದಿಗೆ ಸ್ಕೋರ್ ಹೆಚ್ಚಿಸುತ್ತಲೇ ಹೋಗಿ 25 – 20 ಅಂಕಗಳ ಅಂತರದಲ್ಲಿ ಸೆಟ್ ಗೆದ್ದಿತು.
ಮೂರನೇ ಸೆಟ್ ನಲ್ಲಿ ಮತ್ತೆ ಕೇರಳ ಹವಾ. 10 – 10, 14 – 14, 16 – 16 ಹೀಗೆ ಸಮಬಲದಿಂದಲೇ ಸಾಗುತ್ತಿದ್ದ ಪಂದ್ಯದ ಗತಿ ಬದಲಿಸಲು ಮತ್ತೆ ರೋಶ್ನಾ ಜೋನ್ ಆಟ ಸಹಾಯಕವಾಯಿತು. ಅದ್ಭುತ ಪ್ಲೇಸಿಂಗ್, ಆಕರ್ಷಕ ಸ್ಮಾಶ್ ಮೂಲಕ ರೋಶ್ನಾ 25 – 18 ಅಂಕಗಳಿಂದ ಸೆಟ್ ಗೆದ್ದುಕೊಟ್ಟರು.
ವಾಲಿಬಾಲ್ ನ ನಿಜ ಸೌಂದರ್ಯ ಪ್ರೇಕ್ಷಕರಿಗೆ ಆಸ್ವಾದಿಸಲು ಸಾಧ್ಯವಾದದ್ದು ನಾಲ್ಕನೇ ಸೆಟ್ ನಲ್ಲಿ . ಸ್ಮಾಶ್, ಟೇಕ್, ಬ್ಲಾಕ್, ಲಿಪ್ಟ್.. ಹೀಗೆ ಆಟದ ಎಲ್ಲ ಆಯಾಮಗಳಿಂದ ಚೆಂಡು ಬರೋಬ್ಬರಿ ಎರಡೂವರೆ ನಿಮಿಷ ನೆಲ ಕಾಣದ ಸಂದರ್ಭವೊಂದಕ್ಕೆ ಪಂದ್ಯ ಸಾಕ್ಷಿಯಾಯಿತು. ಆಕ್ರಮಣಕಾರಿ ಆಟವಾಡಿದ ಕೇರಳ ಪೊಲೀಸ್ ತಂಡ ಆಟದ ಎಲ್ಲ ಹಂತಗಳಲ್ಲೂ ಸಮರ್ಥವಾದ ಅಧಿಪತ್ಯ ಸ್ಥಾಪಿಸಿ 25 – 15 ಅಂಕಗಳಿಂದ ಸೆಟ್ ಗೆದ್ದಿತು. ಆ ಮೂಲಕ 3 – 2 ಸೆಟ್ ಗಳಲ್ಲಿ ಪಂದ್ಯ ಗೆದ್ದಿತು.