ಅರಂತೋಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ .ಡಿ.ಎಂ.ಸಿ ವತಿಯಿಂದ 2022 – 23 ನೇ ಶೈಕ್ಷಣಿಕ ವರ್ಷದಿಂದಲೇ ಎಲ್ ಕೆ ಜಿ ಆರಂಭಿಸಲು ಶಿಕ್ಷಣ ಇಲಾಖೆ ಅನುಮತಿ ನೀಡಿದೆ.
ಪ್ರಾಥಮಿಕ ಶಾಲೆಯಲ್ಲಿ ಎಲ್ ಕೆ ಜಿ ತರಗತಿ ಆರಂಭಿಸುವ ಕುರಿತು ಶಾಲಾ ಎಸ್ ಡಿ ಎಂ ಸಿ ಸಭೆಯಲ್ಲಿ ನಿರ್ಣಯ ಕೈಗೊಂಡು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ರಾಜ್ಯ ಯೋಜನಾ ನಿರ್ದೇಶಕರು , ಸಮಗ್ರ ಶಿಕ್ಷಣ ಇಲಾಖೆ ಬೆಂಗಳೂರು ಇವರಿಗೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಶಾಲೆಯಿಂದ ಸಲ್ಲಿಕೆಯಾದ ಪೂರಕ ದಾಖಲೆಗಳ ಪರಿಶೀಲನೆ ಬಳಿಕ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಇವರ ಅನುಮತಿಯಂತೆ ಅರಂತೋಡು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 2022 -23 ನೇ ಶೈಕ್ಷಣಿಕ ವರ್ಷದಿಂದಲೇ ಎಸ್ ಡಿ ಎಂ ಸಿ ವತಿಯಿಂದ ಎಲ್ ಕೆ ಜಿ ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ತಾಲೂಕು ಶಿಕ್ಷಣಾಧಿಕಾರಿಗಳು ಜ್ಞಾಪನಾ ಪತ್ರ ನೀಡಿರುತ್ತಾರೆ .
2022 – 23 ನೇ ಸಾಲಿನ ಎಲ್. ಕೆ.ಜಿ ತರಗತಿಗೆ ಈಗಾಗಲೇ ದಾಖಲಾತಿ ಆರಂಭಗೊಂಡಿದ್ದು , ಪೋಷಕರು ಶಾಲೆಯನ್ನು ಸಂಪರ್ಕಿಸಬಹುದು ಎಂದು ಶಾಲಾ ಮುಖ್ಯ ಶಿಕ್ಷಕರಾದ ಗೋಪಾಲಕೃಷ್ಣ ಬನ ತಿಳಿಸಿದ್ದಾರೆ .