ನಾಳೆ ಬೆಳಿಗ್ಗೆ ಪುತ್ಥಳಿ ಅನಾವರಣ
ಐವರ್ನಾಡಿನ ರಾಜಕೀಯ ಮುಂದಾಳು,ಕೊಡುಗೈದಾನಿಯಾಗಿ,ಐವರ್ನಾಡಿನ ಅಭಿವೃದ್ಧಿಗೆ ಕಾರಣರಾಗಿದ್ದ ದಿ.ಎನ್.ಎಂ.ಬಾಲಕೃಷ್ಣ ಗೌಡರ ಪುತ್ಥಳಿ ಲೋಕಾರ್ಪಣೆಗೆ ಭರದ ಸಿದ್ಧತೆ ನಡೆಯುತ್ತಿದೆ.
ಮೇ .08 ರಂದು ಹಲವಾರು ಜನ ಗಣ್ಯರ ಸಮ್ಮುಖದಲ್ಲಿ ಪುತ್ಥಳಿ ಅನಾವರಣಗೊಳ್ಳಲಿದೆ.
ಐವರ್ನಾಡು ಗ್ರಾಮ ಪಂಚಾಯತ್ ಮತ್ತು ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಹಾಗೂ ಈ ಎರಡೂ ಸಂಸ್ಥೆಗಳಿಗೂ ಐವರ್ನಾಡಿನ ಪೇಟೆಯ ಹೃದಯ ಭಾಗದಲ್ಲಿ ಸ್ಥಳದಾನಿಯಾಗಿ, ಓರ್ವ ಪ್ರಭಾವಿ ರಾಜಕಾರಣಿಯಾಗಿ, ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿ,ತಾಲೂಕು ಬೋರ್ಡ್ ಸದಸ್ಯರಾಗಿ ಜನ ಸೇವೆ ಮಾಡಿ ಕೊಡುಗೈದಾನಿಯೆಂದು ಜನಮನ್ನಣೆ ಗಳಿಸಿದ್ದು ತಾಲೂಕಿನ ಅಭಿವೃದ್ಧಿಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.
ಐವರ್ನಾಡಿನ ಅಣ್ಣನೆಂದೇ ಪ್ರಖ್ಯಾತರಾದ ಇವರ ನೆನಪನ್ನು ಜನಮಾನಸದಲ್ಲಿ ಚಿರಸ್ಥಾಯಿಯಾಗಿಸುವ ಉದ್ದೇಶದಿಂದ ಅವರ ಪುತ್ಥಳಿಯನ್ನು ಐವರ್ನಾಡಿನ ಕೇಂದ್ರ ಭಾಗದಲ್ಲಿ ಸ್ಥಾಪಿಸಲು ಐವರ್ನಾಡಿನ ಜನತೆಯ ಆಶಯದಂತೆ ನಿರ್ಣಯಿಸಲಾಗಿದ್ದು ಪುತ್ಥಳಿ ಸ್ಥಾಪನಾ ಸ್ಥಳದಲ್ಲಿ ಕೆಲಸಗಳು ಭರದಿಂದ ನಡೆಯುತ್ತಿದೆ.
ಸಹಕಾರಿ ಸಂಘದ ಪಕ್ಕದಲ್ಲಿ ಅವರದೇ ಜಾಗದಲ್ಲಿ ರಸ್ತೆ ಹತ್ತಿರ ಪುತ್ಥಳಿ ಸ್ಥಾಪನೆಗೆ
ಭೂಮಿ ಪೂಜೆಯು ಜ.31 ರಂದು ನಡೆದಿತ್ತು.
ಕೆಳಗಿನಿಂದ ಪಿಲ್ಲರ್ ನಿರ್ಮಿಸಿ ಗೋಡೆ ಕಟ್ಟಿ ,ಮೇಲಿನ ಭಾಗದಲ್ಲಿ ರಸ್ತೆಯ ಎತ್ತರಕ್ಕೆ ಸಮಾನವಾಗಿ ಸ್ಲಾಬ್ ನಿರ್ಮಿಸಲಾಗಿದೆ.
ಇಲ್ಲಿ ಪುತ್ಥಳಿ ಸ್ಥಾಪಿಸಲಾಗುವುದು.
ಪುತ್ಥಳಿ ಅನಾವರಣದ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ,ಸಂಸದರು, ಸಚಿವರು ಹಾಗೂ ಹಲವಾರು ಜನ ಗಣ್ಯರು, ರಾಜಕೀಯ ಮುಖಂಡರು, ಸಾವಿರಾರು ಜನರು ಪಾಲ್ಗೊಳ್ಳಲಿದ್ದಾರೆ ಎಂದು
ಪುತ್ಥಳಿ ರಚನಾ ಸಮಿತಿಯ ಅಧ್ಯಕ್ಷ ಎಸ್.ಎನ್.ಮನ್ಮಥರವರು ತಿಳಿಸಿದ್ದಾರೆ.