ಬಿಪಿಸಿಎಲ್ ಅಬ್ಬರದ ಮುಂದೆ ಕೆ.ಎಸ್.ಇ.ಬಿ. ಪವರ್ ಆಫ್
ಜೆರೋಮ್ ಸಿಡಿಲಬ್ಬರದ ಸ್ಮಾಶ್ ಗಳಿಗೆ ಸುಸ್ತಾದ ಕೆ.ಎಸ್.ಇ.ಬಿ.
ಫೈನಲ್ ಗೆ ಲಗ್ಗೆಯಿಟ್ಟ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್
ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಶನ್, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಮತ್ತು ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ಸಂಘಟನಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ನಾಲ್ಕನೇ ದಿನವಾದ ಇಂದು ಮೊದಲ ಸೆಮಿ ಫೈನಲ್ ಕೇರಳದ ಎರಡು ಪ್ರತಿಷ್ಠಿತ ತಂಡಗಳಾದ ಬಿಪಿಸಿಎಲ್ ಮತ್ತು. ಕೆ.ಎಸ್.ಇ.ಬಿ. ತಂಡಗಳ ನಡುವೆ ನಡೆಯಿತು.
ಬಿಪಿಸಿಎಲ್ ನಾಯಕ ಅಖಿನ್ ನಿನ್ನೆಯ ಪಂದ್ಯದಲ್ಲಿ ಗಾಯಾಳುವಾಗಿದ್ದರಿಂದ ಅವರ ಸ್ಥಾನಕ್ಕೆ ಹೊಸ ಆಟಗಾರನಾಗಿ ಕ್ಯಾಲಿಕೇಟ್ ತಂಡದ ನಾಯಕನೂ ಆಗಿರುವ ಜಾನ್ ಜೋಸೆಫ್ ಆಗಮಿಸಿದ್ದರು. ನಿನ್ನೆ ಗಾಯಗೊಂಡಿದ್ದ ಮುತ್ತುಸ್ವಾಮಿ ಇಂದು ಚೇತರಿಸಿ ತಂಡದ ನಾಯಕತ್ವ ವಹಿಸಿದ್ದರು. ಕೆ.ಎಸ್.ಇ.ಬಿ. ಅನ್ಸಾಲ್ ಮಹಮ್ಮದ್ ಸಾರಥ್ಯದಲ್ಲಿ ಮೈದಾನಕ್ಕಿಳಿದಿತ್ತು.
ನಿನ್ನೆಯ ಪಂದ್ಯದಲ್ಲಿ ಗಾಯದ ಬರೆಯಿಂದಾಗಿ ತನ್ನ ಎಂದಿನ ಪ್ರದರ್ಶನ ತೋರದಿದ್ದ ಬಿಪಿಸಿಎಲ್ ಇಂದು ಮೊದಲ ಸೆಟ್ ನಲ್ಲಿಯೇ ತನ್ನ ಅತ್ಭುತ ಫಾರ್ಮ್ ತೋರಿತು.
ರಾಷ್ಟೀಯ ಮತ್ತು ಅಂತರಾಷ್ಟ್ರೀಯ ಪಂದ್ಯಾಟವಾಡಿದ ಆಟಗಾರರ ಖಜಾನೆಯಾಗಿದ್ದ ತಂಡ ಮುತ್ತು ಸ್ವಾಮಿ, ಜೆರೋಮ್ ವಿನೀತ್, ಜಾರ್ಜ್, ಸೇತು ಮೊದಲಾದವರ ಆಕ್ರಮಣಶೀಲ ಆಟದಿಂದ ಸ್ಪಷ್ಟ ಮೇಲುಗೈ ಸಾಧಿಸಿತು. ಕೆ.ಎಸ್.ಇ.ಬಿ. ತಂಡವೂ ಪ್ರತಿಭಾವಂತ ಆಟಗಾರದಿಂದ ಕೂಡಿದ್ದರೂ ಗೆಲುವಿನ ನಿರ್ವಹಣೆ ಸಾಧ್ಯವಾಗಲಿಲ್ಲ. ಬಿಪಿಸಿಎಲ್ 25 – 16 ಅಂಕಗಳ ಅಂತರದಲ್ಲಿ ಸೆಟ್ ಗೆದ್ದಿತು.
ಎರಡನೇ ಸೆಟ್ ನಲ್ಲೂ ಪ್ರಾಬಲ್ಯ ಮೆರೆದ ಬಿಪಿಸಿಎಲ್ ಜೆರೋಮ್ ವಿನೀತ್, ರೋಹಿತ್ ಅವರ ಸಿಡಿಲಬ್ಬರದ ಸ್ಮಾಶ್ ಗಳೊಂದಿಗೆ ಅಂಕ ಬಾಚಿತು. ಅನ್ಸಾಬ್ ಅವರ ಎಡಗೈಯ ಶಕ್ತಿಶಾಲಿ ಹೊಡೆತಗಳು ಮಾತ್ರ ಕೆ.ಎಸ್.ಇ.ಬಿ.ಗೆ ಪವರ್ ತಂದುಕೊಟ್ಟಿತು. ಅಂತಿಮವಾಗಿ 25 – 18 ಅಂತರದಲ್ಲಿ ಬಿಪಿಸಿಎಲ್ ಸೆಟ್ ಗೆದ್ದು 2 – 0 ಮುನ್ನಡೆ ಸಾಧಿಸಿತು.
ಮೂರನೇ ಸೆಟ್ ನಲ್ಲಿ ಸಮಬಲದ ಸೆಣೆಸಾಟ. ಪಂದ್ಯದ ಅಂತ್ಯದವೆಗೂ ಕುತೂಹಲ ಉಳಿಸಿಕೊಂಡ ಪಂದ್ಯ ರೋಮಾಂಚಕತೆಗೆ ಸಾಕ್ಷಿಯಾಯಿತು.
ಅದ್ಭುತ ಸರ್ವ್, ಬಲಿಷ್ಠ ಪ್ರತಿರೋಧ ಶಕ್ತಿ ಸಾಬೀತುಪಡಿಸಿದ ಬಿಪಿಸಿಎಲ್ ಈ ಸೆಟ್ ನ್ನು 25 ,- 21 ಅಂಕಗಳ ಅಂತರದಲ್ಲಿ ಗೆದ್ದು 3 – O ಸೆಟ್ ಗಳೊಂದಿಗೆ ಪಂದ್ಯ ತನ್ನದಾಗಿಸಿ ಫೈನಲ್ ಪ್ರವೇಶಿಸಿದರು.