ಐದು ಸೆಟ್ ಗಳ ರೋಚಕ ಹಣಾಹಣಿಯಲ್ಲಿ ಕರ್ನಾಟಕಕ್ಕೆ ತಲೆ ಬಾಗಿದ ಗುಜರಾತ್
ಬಿಪಿಸಿಎಲ್ – ಕರ್ನಾಟಕ ಪೋಸ್ಟಲ್ ನಡುವೆ ಪುರುಷರ ಫೈನಲ್
ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಶನ್, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಮತ್ತು ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ಸಂಘಟನಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಐದು ದಿನಗಳ ಆಹ್ವಾನಿತ ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ಶಿಪ್ ನ ನಾಲ್ಕನೇ ದಿನ ನಡೆದ ಎರಡನೇ ಉಪಾಂತ್ಯ ಪಂದ್ಯದಲ್ಲಿ ಕರ್ನಾಟಕ ಪೋಸ್ಟಲ್ ತಂಡವು ಗುಜರಾತ್ ನ ಯುನೈಟೆಡ್ ಇಂಡಿಯನ್ ಸ್ಪೈಕರ್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದೆ.
ಇತ್ತಂಡಗಳೂ ಅಂತರ್ ರಾಷ್ಟ್ರೀಯ, ರಾಷ್ಡ್ರೀಯ, ಪ್ರೈಮ್ ವಾಲಿ ತಾರೆಯರನ್ನು ಹೊಂದಿದ್ದು, ಎ. ಕಾರ್ತಿಕ್ ಸಾರಥ್ಯದಲ್ಲಿ ಕರ್ನಾಟಕ ತಂಡವೂ, ಪ್ರಸನ್ನ ನೇತೃತ್ವದಲ್ಲಿ ಗುಜರಾತ್ ತಂಡವೂ ಕಣಕ್ಕಿಳಿದಿತ್ತು.
ಮೊದಲ ಸೆಟ್ ನಲ್ಲಿ ಖಾತೆ ಆರಂಭಿಸಿದ ಗುಜರಾತ್ ಬಳಿಕ ಕರ್ನಾಟಕಕ್ಕೆ ಮುನ್ನಡೆ ಬಿಟ್ಟುಕೊಟ್ಟಿತು. ರೈಸನ್ , ಕಾರ್ತಿಕ್ ಹೊಡೆತಗಳ ಮುಂದೆ ಗುಜರಾತ್ ಮಂಕಾಯಿತು. ಸರ್ವಿಸ್ ಎರರ್ ಗಳೂ ಗುಜರಾತ್ ಗೆ ಮುಳುವಾಯಿತು. ಅಂತಿಮವಾಗಿ 25 – 14 ಅಂತರದಲ್ಲಿ ಗುಜರಾತನ್ನು ಅದುಮಿದ ಕರ್ನಾಟಕ ಮೊದಲ ಸೆಟ್ ಗೆದ್ದಿತು.
ವಾಲಿಬಾಲ್ ನ ಆಕ್ರಮಣಶೀಲ ಆಟದ ಸಹಜ ಸೌಂದರ್ಯ ಪ್ರದರ್ಶಸಿದ ಎರಡನೇ ಸೆಟ್ ಗುಜರಾತ್ ಗೆದ್ದುಕೊಂಡಿತು. ರಮಣ್ ಚೌದರಿ ಶಕ್ತಿಶಾಲಿ ಹೊಡೆತಗಳ ಮಹಾ ಸಂಗಮವಾದ ಈ ಸೆಟ್ ಅಕ್ಷರಶಃ ಸ್ಮಾಶ್ , ಬ್ಲಾಕ್ ಗಳ ಜಿದ್ದಾ ಜಿದ್ದಿನ ಕಣವಾಯಿತು. ಅಂತಿಮವಾಗಿ 25 – 20 ಅಂಕಗಳೊಂದಿಗೆ ಗುಜರಾತ್ ಪರವಾಯಿತು. ಸೆಟ್ ಸಮಬಲ.
ಮೂರನೇ ಸೆಟ್ ಕುತೂಹಲದ ಕಣವಾಯಿತು. ಮತ್ತೆ ಮಿಂಚಿದ ರಮಣ್ ಚೌಧರಿ ಸ್ಮಾಶ್, ನಾಯಕ ಪ್ರಸನ್ನ ಅವರ ತಂತ್ರಗಾರಿಕೆಯ ಪ್ಲೇಸಿಂಗ್ ಮೂಲಕ ಗುಜರಾತ್ ಮುನ್ನಡೆ ಪಡೆಯಿತು. ಅದ್ಭುತ ಕಾಂಬಿನೇಶನ್ ಆಟವಾಡಿ ಗೆದ್ದು ಬೀಗಿತು. ಅಂಕ 25 – 19.
ನಾಲ್ಕನೇ ಸೆಟ್ ನ ಆರಂಭದಲ್ಲಿ ಕರ್ನಾಟಕ ಸ್ಪಷ್ಟ ಮುನ್ನಡೆ ಸಾಧಿಸಿತ್ತು. ಆದರೆ ಚೌಧರಿ ಸ್ಮಾಶ್ ಮ್ಯಾಜಿಕ್ ಪಂದ್ಯದ ಗತಿ ಬದಲಿಸುವಂತೆ ಕಂಡಿತಾದರೂ ಪ್ರತಿರೋಧ ತೋರಿದ
ಕರ್ನಾಟಕ ಗುಜರಾತನ್ನು ತಡೆದು ನಿಲ್ಲಿಸಿತು. ಪರಿಣಾಮ 25 – 21 ಅಂಕ ಗಳಿಸಿ ಸೆಟ್ ಸಮಬಲ ಮಾಡಿಕೊಂಡಿತು.
ಐದನೇ ಮತ್ತು ನಿರ್ಣಾಯಕ ಪಂದ್ಯದಲ್ಲಿ ಪೂರ್ಣ ಹಿಡಿತ ಸಾಧಿಸಿದ ಕರ್ನಾಟಕ ಗುಜರಾತ್ ಆಟಗಾರರ ಎಲ್ಲ ಸ್ಮಾಶ್ ಗಳಿಗೆ ತಡೆಗೋಡೆಯಾಯಿತು. ಒಂದು ಹಂತದಲ್ಲಿ 8 – 0 ಅಂಕದಿಂದ ಮುನ್ನಡೆದಿದ್ದ ಕರ್ನಾಟಕ ಅಂತಿಮವಾಗಿ 15 – 10 ಅಂಕಗಳಿಂದ ಗೆಲುವು ಪಡೆಯಿತು.
3 – 2 ಸೆಟ್ ಗಳಿಂದ ಪಂದ್ಯ ಗೆದ್ದು ಫೈನಲ್ ಎಂಟ್ರಿ ಪಡೆಯಿತು.5Ô