ಶಿಕ್ಷಣ ರಂಗದಲ್ಲಿ ಮುಸ್ಲಿಂ ಮಹಿಳೆಯರಿಗೆ ಹೊಸ ಅವಕಾಶ
ಕಲ್ಲುಗುಂಡಿ ಮಸೀದಿ ಆಶ್ರಯದಲ್ಲಿ ಫಾತಿಮಾ ಮಹಿಳಾ ಶರೀಅತ್ ಕಾಲೇಜು ಆರಂಭಿಸಲು ನಿರ್ಧರಿಸಲಾಗಿದ್ದು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ವರ್ಷವೇ ಕಾಲೇಜು ಆರಂಭಗೊಳ್ಳಲಿದೆ ಎಂದು ಕಾಲೇಜು ನಿರ್ವಹಣಾ ಸಮಿತಿಯ ಉಪಾಧ್ಯಕ್ಷ ತಾಜ್ ಮಹಮ್ಮದ್ ಹೇಳಿದ್ದಾರೆ.
ಮೇ.7 ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ಶಿಕ್ಷಣ ರಂಗದಲ್ಲಿ ಮುಸ್ಲಿಂ ಮಹಿಳೆಯರಿಗೆ ಹೊಸ ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ರೂಪಿಸಲಾದ ಧಾರ್ಮಿಕ ಬೌದ್ಧಿಕ ಸಮನ್ವಯ ಶಿಕ್ಷಣ ಪದ್ಧತಿಯು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಪ್ರಸಕ್ತಿ ಪಡೆಯುತ್ತಿದೆ. ಸ್ತ್ರೀ ಪ್ರಧಾನ ಪಾತ್ರ ವಹಿಸುವ ಕುಟುಂಬ ವ್ಯವಸ್ಥೆ ಹೊಂದಿರುವ ನಮ್ಮ ಸಮಾಜದಲ್ಲಿ ಮಹಿಳೆಯರು ಶಾಲಾ ಕಾಲೇಜು ಶಿಕ್ಷಣ ಪಡೆಯುವುದರ ಜತೆಗೆ ಧಾರ್ಮಿಕ, ನೈತಿಕ ಮತ್ತು ಕೌಟುಂಬಿಕ ವಿಷಯಗಳಲ್ಲಿ ಪರಿಜ್ಞಾನ ಹೊಂದಬೇಕಾಗಿರುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಪಿ.ಯು.ಸಿ. ಕೋರ್ಸ್ ಜತೆಗೆ ಧಾರ್ಮಿಕ, ನೈತಿಕ ಮತ್ತು ಕೌಟುಂಬಿಕ ವಿಷಯಗಳನ್ನು ಒಳಪಡಿಸಿ ಫಾಳಿಲಾ ಬಿರುದು ನೀಡುವ ಶರೀಅತ್ ಕಾಲೇಜು ಕಲ್ಲುಗುಂಡಿ ಜುಮಾ ಮಸೀದಿಯನ್ನು ಕೇಂದ್ರೀಕರಿಸಿ ಈ ಬಾರಿಯ ಶೈಕ್ಷಣಿಕ ವರ್ಷದಿಂದ ಆರಂಭಗೊಳ್ಳಲಿದೆ. ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ವಾಣಿಜ್ಯ ಅಥವಾ ಕಲಾ ವಿಭಾಗದಲ್ಲಿ ಪದವಿಪೂರ್ವ ಶಿಕ್ಷಣ ಪಡೆಯುವುದರ ಜತೆಗೆ ಈ ಶರೀಅತ್ ಕೋರ್ಸ್ ಕಲಿಯಲು ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಸುರಕ್ಷಿತ ಮತ್ತು ಶೈಕ್ಷಣಿಕ ವಾತಾವರಣದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಗುರಿ ಹೊಂದಲಾಗಿದ್ದು ಅದಕ್ಕಾಗಿ ಪ್ರತ್ಯೇಕ ನಿರ್ವಹಣಾ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದರು.
ನಿರ್ವಹಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎ.ಕೆ. ಹಸೈನಾರ್, ಗೌರವಾಧ್ಯಕ್ಷ ಸಂಟ್ಯಾರ್ ಅಬ್ಬಾಸ್ ಹಾಜಿ ಪತ್ರಿಕಾಗೋಷ್ಠೀಯಲ್ಲಿದಗ್ದರು.