ನವಮಾಸ ಹೊತ್ತೆ ನೀ ಅಂದು ಭಾರವ
ಕಣ್ಮುಚ್ಚಿ ಬೆಚ್ಚಗಿದ್ದೆ ತಲೆಬಾಗಿ ಶಿರವ.
ತೋರಿಸಿದೆ ನೀ ಎನಗೆ ಈ ಭುವನವ
ಸಂಸಾರದ ನೊಗಕ್ಕೆ ಆದಾರವೇ ನಿನ್ನ ಜೀವ.
ಭಾಗಿಯಾದೆ ನೀ ರಮಣನ ಕಷ್ಟಸುಖದಲಿ
ದಣಿಯಿತು ನಿನ್ನ ತನುವು ಹಗಲಿರುಳಿನಲಿ.
ತವಕಿಸುವವು ನಯನಗಳು ನಿನ್ನ ದರುಶನಕ್ಕೆ
ಮಿಡಿಯುವವು ಹೃದಯಗಳು ನಿನ್ನ ಒಡಲಿಗೆ.
ಹಿತವಾದ ಮಿತವಾದ ನಡೆಯು ನಿನ್ನದು
ಅದ ಅನುಸರಿಸುವ ದಾರೀಗ ನಮ್ಮದು.
ತಾನು ಹಸಿದರೂ ಮಕ್ಕಳ ಉದರ ತುಂಬಿದ ಒಡತಿ
ಸಂಸಾರದ ಬಂಡಿಗೆ ಆದೆ ನೀ ಸಾರಥಿ.
ವೃದ್ದಾಪ್ಯದಲ್ಲೂ ಕಾಣುತ್ತಿರುವೆ ನಿನ್ನಲ್ಲಿ ಹರೆಯ
ಎಂದೆಂದಿಗೂ ಆಗುವೆ ನಾ ತನ್ಮಯ.
ಶಬ್ಧ ಭಂಡಾರಕ್ಕೆ ಅಂತ್ಯವಿಲ್ಲ ನಿನ್ನ ಬಣ್ಣಿಸಲು
ಅಮ್ಮನಿಗೆ ಸರಿಸಾಟಿಯಿಲ್ಲ ಪರ್ಯಾಯ ಪದಗಳು.
ನೀ ಮಾಡಿದ ಪುಣ್ಯದ ಫಲವೋ ಗೊತ್ತಿಲ್ಲ
ಪಡೆಯುತ್ತಿರುವೆ ನೀನೀಗ ಅದರ ಪ್ರತಿಫಲ.
ಆಡಿಸುತ್ತಾ ಕಾಲಕಳೆಯುವೆ ಮುದ್ದು ಮೊಮ್ಮಕ್ಕಳ ಜೊತೆ
ಎಂಭತ್ತರ ಹೊಸ್ತಿಲಲ್ಲಿರುವಿ ಮಗಳಂತಹ ಸೊಸೆಯ ಜೊತೆ.
ಈ ನಿನ್ನ ಕೊನೆಯಂಚಿನಲ್ಲಿ ನನ್ನದೊಂದು ಹಾರೈಕೆ ಅವ್ವ
ನಿನ್ನ ಜೀವನದ ಆಯಸ್ಸಿಗೆ ಶತಮಾನ ತುಂಬವ್ವ.
ಕಣ್ತುಂಬ ಕಂಡೆ ನೀ ಮಕ್ಕಳ ಸುಖವ
ಕಡೆ ಉಸಿರಿನ ತನಕ ಸುಖವಾಗಿ ಇರವ್ವ..
- ಶ್ರೀಮತಿ ಹೇಮಾ, ಶಿಕ್ಷಕಿ ಜ್ಞಾನದೀಪ ಎಲಿಮಲೆ