ಸುಳ್ಯದ ನಗರದ ಕಸದ ಸಮಸ್ಯೆಯ ಕುರಿತು ಬಿಜೆಪಿ ಸಾಮಾಜಿಕ ಜಾಲತಾಣದ ಪ್ರಮುಖರಾದ ಸುಪ್ರೀತ್ ಮೋಂಟಡ್ಕರು ಫೋಟೊಗಳನ್ನು ಕ್ಲಿಕ್ಕಿಸಿ ಚಿತ್ರ ನಟ ಅನಿರುದ್ಧ್ ರವರಿಗೆ ಕಳುಹಿಸಿದ್ದರು. ಆ ಚಿತ್ರಗಳನ್ನು ನೋಡಿದ ಅನಿರುದ್ಧ್ ರವರು, ಸ್ವತಃ ತಾವೇ ವಿಡಿಯೋ ಮಾಡಿಕೊಂಡು “ಈಗಷ್ಟೆ ಮೀನುಗಾರಿಕೆ ಇಲಾಖೆಯ ನಿರ್ದೇಶಕರಾದ ಸುಪ್ರೀತ್ ಮೋಂಟಡ್ಕರು ಕೆಲವು ಚಿತ್ರಗಳನ್ನು ನನಗೆ ಕಳುಹಿಸಿದ್ದು, ಅದರಲ್ಲಿ ಸುಳ್ಯ ನಗರದ ಕಸದ ರಾಶಿ ಇದೆ. ಅದೊಂದು ದೊಡ್ಡ ಬೆಟ್ಟದಂತಿದೆ. ಎಷ್ಟೋ ವರ್ಷದ ಕಸ. ಸ್ಥಳೀಯರು ಪ್ರಯತ್ನ ಪಟ್ಟರೂ ಪರಿಹಾರ ಸಿಗ್ತಾ ಇಲ್ಲ. ಈ ವಿಡಿಯೋ ಮೂಲಕ ನಾನು ಅಧಿಕಾರಿಗಳಲ್ಲಿ ಮತ್ತು ಜನಪ್ರತಿನಿಧಿಗಳಲ್ಲಿ ವಿನಂತಿಸುತ್ತಿರುವುದು ಏನೆಂದರೆ ಆ ಕಸವನ್ನು ಆದಷ್ಟು ಬೇಗ ಅಲ್ಲಿಂದ ತೆರವು ಮಾಡಬೇಕೆಂದು ಕಳ ಕಳಿಯಿಂದ ವಿನಂತಿಸುತ್ತೇನೆ ” ಎಂದು ಹೇಳಿದ್ದಾರೆ.
ಈ ವೀಡಿಯೋ ಕ್ಲಿಪ್ಪಿಂಗನ್ನು ಸುಪ್ರೀತ್ ಮೋಂಟಡ್ಕರು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದರು. `ಬಿಜೆಪಿ ಸುಳ್ಯ ಮೀಡಿಯಾ’ ವಾಟ್ಸಾಪ್ ಗ್ರೂಪ್ಗೆ ಇಂದು ಮಧ್ಯಾಹ್ನ ೩ ಗಂಟೆ ೪೪ ನಿಮಿಷಕ್ಕೆ ಹಾಕಿದ್ದರು. ಆ ವೀಡಿಯೋ ಬಂದ ಕೆಲವೇ ನಿಮಿಷದಲ್ಲಿ ಆ ಗ್ರೂಪ್ನ ಆಡ್ಮಿನ್ ಆಗಿರುವ ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲರು ಸುಪ್ರೀತ್ರನ್ನು ಗ್ರೂಪ್ ನಿಂದ ರಿಮೂವ್ ಮಾಡಿದ್ದಾರೆ.
ಈ ಕುರಿತು ಸುಪ್ರೀತ್ ಮೋಂಟಡ್ಕರನ್ನು ಸಂಪರ್ಕಿಸಿ ವಿಚಾರಿಸಿದಾಗ “ಪ್ರಧಾನಿ ಮೋದಿಯವರ ಸ್ವಚ್ಚತೆಯ ಕಲ್ಪನೆ ನಗರ ವ್ಯಾಪ್ತಿಯಲ್ಲಿ ಸಾಕಾರ ಆಗುತ್ತಿಲ್ಲ. ಸುಳ್ಯ ನಗರ ಪಂಚಾಯತ್ ಎದುರಿನ ಶೆಡ್ನಲ್ಲಿ ಇರುವ ಕಸದ ಚಿತ್ರಗಳನ್ನು ನಾನು ತೆಗೆದಿದ್ದೆ. ಅದನ್ನು ನನ್ನ ಸ್ನೇಹಿತರಾಗಿರುವ ಚಿತ್ರನಟ ಅನಿರುದ್ಧ್ರಿಗೆ ಕಳುಹಿಸಿದ್ದೆ. ಅದನ್ನು ನೋಡಿದ ಅವರು ನ.ಪಂ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಲ್ಲಿ ಕಸ ತೆರವು ಮಾಡುವಂತೆ ವಿನಂತಿಸಿಕೊಂಡಿದ್ದಾರೆ. ಇದು ಜಾಗೃತಿಗಾಗಿ ಅಷ್ಟೇ. ಎಂದು ಹೇಳಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲರನ್ನು ಸಂಪರ್ಕಿಸಿ ವಿಚಾರಿಸಿದಾಗ, “ನಮ್ಮ ಪಕ್ಷದಲ್ಲಿ ಒಂದು ಶಿಸ್ತು ಇದೆ. ಅದಕ್ಕೆ ವಿರುದ್ಧವಾಗಿ ಯಾರೂ ನಡೆದುಕೊಳ್ಳಬಾರದು. ಸುಳ್ಯದ ಕಸ ತೆರವಿಗೆ ಪ್ರಯತ್ನಗಳು ನಡೆಯುತ್ತಿದೆ” ಎಂದು ಹೇಳಿದರು.