ಸುದ್ದಿ ವೆಬ್ಸೈಟ್ ವರದಿಯ ಹೆಡ್ಡಿಂಗ್ ತಿರುಚಿ ಪ್ರಸಾರ : ಕಾನೂನು ಕ್ರಮಕ್ಕೆ ನಿರ್ಧಾರ
ಬಿಜೆಪಿ ಮೀಡಿಯಾ ವಾಟ್ಸಾಪ್ ಗ್ರೂಪಿನಿಂದ ಸುಪ್ರೀತ್ ಮೋಂಟಡ್ಕ ಅವರನ್ನು ತೆಗೆದು ಹಾಕಿದ ಕುರಿತು ಸುದ್ದಿ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯ ಹೆಡ್ಡಿಂಗ್ನ್ನು ತಮಗೆ ಬೇಕಾದ ಹಾಗೆ ತಿರುಚಿ ಪ್ರಸಾರ ಮಾಡುತ್ತಿರುವ ಕುರಿತು ಮಾಹಿತಿ ಲಭಿಸಿದ್ದು, ಕಾನೂನು ಕ್ರಮಕ್ಕೆ ಸಂಸ್ಥೆ ಮುಂದಾಗಿದೆ.
ಬಿಜೆಪಿಯ ಸಾಮಾಜಿಕ ಜಾಲತಾಣದ ಪ್ರಮುಖರಾದ ಸುಪ್ರೀತ್ ಮೋಂಟಡ್ಕರವರು ಸುಳ್ಯದ ಕಸದ ಸಮಸ್ಯೆಯ ಬಗ್ಗೆ ಚಿತ್ರ ನಟ ಅನಿರುದ್ಧ್ ಅವರಿಗೆ ತಿಳಿಸಿದ್ದು, ಅವರು ನೀಡಿದ ವೀಡಿಯೋ ಹೇಳಿಕೆಯನ್ನು ಸುಪ್ರೀತ್ ಬಿಜೆಪಿ ಮೀಡಿಯಾ ವಾಟ್ಸಾಪ್ ಗ್ರೂಪ್ಗೆ ಹಾಕಿದ್ದರು. ಕೆಲವೇ ಕ್ಷಣಗಳಲ್ಲಿ ಗ್ರೂಪ್ ಎಡ್ಮಿನ್ ಆಗಿರುವ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸುಬೋಧ್ ಶೆಟ್ಟಿ ಮೇನಾಲರವರು ಗ್ರೂಪಿನಿಂದ ಸುಪ್ರೀತ್ರನ್ನು ರಿಮೂವ್ ಮಾಡಿದ್ದರು. ಈ ವಿದ್ಯಮಾನದ ವರದಿಯನ್ನು ಇಬ್ಬರ ಪ್ರತಿಕ್ರಿಯೆಯೊಂದಿಗೆ ನಿಮ್ನೆ ಸುದ್ದಿ ವೆಬ್ಸೈಟ್ನಲ್ಲಿ “ಅನಿರುದ್ಧರಿಂದ ಕಸ ತೆಗೆಯಬೇಕೆಂಬ ಹೇಳಿಕೆ ಕೊಡಿಸಿದ ಸುಪ್ರೀತ್ ಮೋಂಟಡ್ಕ ಬಿ.ಜೆ.ಪಿ. ಮಾಧ್ಯಮ ಗ್ರೂಪ್ ನಿಂದ ಔಟ್ ” ಎಂಬ ಹೆಡ್ಡಿಂಗ್ನಲ್ಲಿ ವರದಿ ಪ್ರಕಟಿಸಲಾಗಿತ್ತು.
ಇಂದು ವರದಿಯ ನ್ಯೂಸ್ ಲಿಂಕ್ ಹೆಡ್ಡಿಂಗ್ “ಸುಳ್ಯ: ಬಿಜೆಪಿಯ ದುರಾಡಳಿತವನ್ನು ಪ್ರಶ್ನಿಸಿದ ಸ್ವಪಕ್ಷೀಯನನ್ನು ಗ್ರೂಪಿನಿಂದ ಹೊರಗಿಟ್ಟ ಬಿಜೆಪಿ …. ಸಾರ್ವಜನಿಕ ಕಾಳಜಿಯಿಂದ ನಗರ ಪಂಚಾಯತ್ ಎದುರಿನ ಕಸವನ್ನು ವಿಲೇವಾರಿ ಮಾಡಬೇಕು ಎಂದದ್ದು ಬಿಜೆಪಿಯ ಪ್ರಕಾರ ಅಶಿಸ್ತು. ಕಾಮಗಾರಿಗಳಲ್ಲಿ 4೦% ಕಮಿಷನ್ ಪಡೆಯುವುದು ಶಿಸ್ತು” ಎಂದು ಕಾಣುವ ಹಾಗೆ ತಿರುಚಿ ಶೇರ್ ಆಗುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತಂತೆ ಕಾನೂನು ಕ್ರಮ ಕೈಗೊಳ್ಳಲು ಸಂಸ್ಥೆ ಮುಂದಾಗಿದೆ.