ಅನಿರುದ್ಧ್ ಗೆ 10 ಲಾರಿ ಕಳುಹಿಸಲು ಹೇಳಿ ಎಂದು ನ.ಪಂ. ಅಧ್ಯಕ್ಷರ ಕಮೆಂಟ್
10 ಲಾರಿ ಕಳುಹಿಸುತ್ತೇನೆ ; ನಾನು ಪ್ರಚಾರಕ್ಕಾಗಿ ಮಾಡಿದ್ದಲ್ಲ : ಮತ್ತೆ ವಿಡಿಯೋ ಹರಿಬಿಟ್ಟ ಅನಿರುದ್ಧ್
ಸುಳ್ಯ ನಗರ ಪಂಚಾಯತ್ ಎದುರು ಶೆಡ್ ನಲ್ಲಿ ತುಂಬಿಸಲಾಗಿರುವ ಕಸದ ಫೋಟೊ ಚಿತ್ರನಟ ಅನಿರುದ್ಧ್ ಗೆ ತಲುಪಿ ಅವರು ಕಸ ತೆರವಿಗೆ ಮನವಿ ಮಾಡಿಕೊಂಡಿರುವ ವಿಡಿಯೋ ವೈರಲ್ ಆಗಿ ಸುಪ್ರೀತ್ ಮೋಂಟಡ್ಕ ರನ್ನು ಬಿಜೆಪಿ ಮೀಡಿಯಾ ವಾಟ್ಸಾಪ್ ಗ್ರೂಪ್ ನಿಂದ ರಿಮೂವ್ ಮಾಡಿದ ವಿಚಾರ ಮಾಧ್ಯಮ ದಲ್ಲಿ ಪ್ರಚಾರ ಪಡೆದ ಮತ್ತು ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ರು ಅನಿರುದ್ಧ್ ಹೇಳಿಕೆಯಿಂದ ಅಸಮಾಧಾನಗೊಂಡು ವಾಟ್ಸಾಪ್ ನಲ್ಲಿ ಹಾಕಿರುವ ಕಮೆಂಟ್ ಅನಿರುದ್ಧ್ ಇಂದು ಮತ್ತೆ ತಿರುಗೇಟು ನೀಡಿದ್ದಾರೆ.
ಸುಳ್ಯ ನಗರ ಪಂಚಾಯತ್ ಎದುರು ಶೆಡ್ ನಲ್ಲಿ ಕಸ ತುಂಬಿ ದುರ್ನಾತ ಬೀರುತ್ತಿರುವ ಕುರಿತು ಬಿಜೆಪಿ ಸಾಮಾಜಿಕ ಜಾಲತಾಣದ ಸಹ ಸಂಚಾಲಕ ಸುಪ್ರಿತ್ ಮೋಂಟಡ್ಕರವರು ಚಿತ್ರನಟ ಹಾಗೂ ದಿ. ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ರಿಗೆ ವಾಟ್ಸಾಪ್ ನಲ್ಲಿ ಕಳುಹಿಸಿದ್ದರು. ಆ ಚಿತ್ರಗಳನ್ನು ನೋಡಿದ ಅನಿರುದ್ಧ್ ರವರು ತಾವೇ ವಿಡಿಯೋ ಒಂದನ್ನು ಮಾಡಿ ಸುಳ್ಯ ನಗರ ಪಂಚಾಯತ್ ಎದುರು ಇರುವ ಕಸವನ್ನು ತೆರವು ಮಾಡಿ, ಸ್ವಚ್ಚತೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದ್ದರು.
ಈ ವೀಡಿಯೋ ವನ್ನು ಸುಪ್ರೀತ್ ಬಿಜೆಪಿ ಮೀಡಿಯಾ ವಾಟ್ಸಾಪ್ ಗ್ರೂಪ್ ನಲ್ಲಿ ಹಾಕಿದ್ದರು. ಕೆಲವೇ ಕ್ಷಣಗಳಲ್ಲಿ ಸುಪ್ರೀತ್ ಅವರನ್ನು ಈ ಗ್ರೂಪ್ ನಿಂದ ರಿಮೂವ್ ಮಾಡಲಾಗಿತ್ತು.
ಈ ವಿದ್ಯಮಾನ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಪಡೆಯಿತಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಲ್ಲಿಯೂ ಚರ್ಚೆಯಾಯಿತು. ವಾಟ್ಸಾಪ್ ಗ್ರೂಪೊಂದರಲ್ಲಿ ನ.ಪಂ. ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅವರು ಈ ಕುರಿತ ವರದಿಯೊಂದಕ್ಕೆ ಪ್ರತಿಕ್ರಯಿಸಿ, ” ಅನಿರುದ್ಧ್ ಗೆ 10 ಲಾರಿ ಕಳುಹಿಸಲು ಹೇಳಿ . ಲೋಡಿಂಗ್ ನಮ್ಮ ಕಾರ್ಮಿಕರಿಂದ ಮಾಡಿಸ್ತೇವೆ. ಫೇಸ್ಬುಕ್ ವಿಡಿಯೋ ದಿಂದ ಸಮಸ್ಯೆ ಬಗೆಹರಿಯಲ್ಲ” ಎಂದು ಕಮೆಂಟ್ ಹಾಕಿದ್ದರು.
ಅಲ್ಲದೆ ಅನಿರುದ್ಧ್ ಅವರ ಫೇಸ್ ಫೇಸ್ ಬುಕ್ ಖಾತೆಗೆ ಪ್ರತಿಕ್ರಯಿಸಿ, ಮನವಿ ಮಾಡೊರೋದ್ರಿಂದ ಸಮಸ್ಯೆಗಳು ಬಗೆಹರಿಯೋದಾದ್ರೆ ದೇಶದಲ್ಲಿ ಯಾವ ಸಮಸ್ಯೆಗಳೂ ಕೂಡಾ ಇರುತ್ತಿರಲಿಲ್ಲ. ಯಾರೋ ಕೆಲಸ ಇಲ್ಲದವರು ಅಲ್ಲಿಯ ಜನಪ್ರತಿನಿಧಿಗಳ ಪ್ರಾಮಾಣಿಕ ಪ್ರಯತ್ನವನ್ನು ಅವಲೋಕಿಸದ ಪ್ರಚಾರಕ್ಕೋಸ್ಕರ ಮೆಸೇಜ್ ಮಾಡಿದ್ರೆ ಪೂರ್ವಾಪರ ಯೋಚಿಸದೆ ಅದನ್ನು ಶೇರ್ ಮಾಡೋದಲ್ಲ. ಕಾನೂನು ನಿಯಮಗಳ ಎಲ್ಲಾ ಅಗತ್ಯತೆಗಳನ್ನು ಪೂರೈಸಿ ಕಸ ಸಾಗಾಟಕ್ಕೆ ವ್ಯವಸ್ಥೆ ಆಗುತ್ತಿದೆ. ಊಟ ರೆಡಿ ಆದ ಮೇಲೆ ಬಡಿಸೋಕೆ ಬಂದಂತವರ ಕತೆ ಆಯ್ತು ಇದು. ಕಸ ವಿಲೇವಾರಿಗೆ ಅದರದ್ದೆ ಆದ ಕಾನೂನಾತ್ಮಕ ತೊಡಕುಗಳಿವೆ. ಅದನ್ನೆಲ್ಲಾ ನಿವಾರಿಸಿ ಟೆಂಡರ್ ಪ್ರಕ್ರಿಯೆ ಚಾಲು ಆಗಿದೆ. ಕಸ ಹೋಗಿಯೇ ಹೋಗುತ್ತದೆ ಯಾರ ಫೇಸ್ಬುಕ್ ಮನವಿಯ ಕಾರಣದಿಂದಲೂ ಅಲ್ಲ.ನಮ್ಮ ಇಚ್ಛಾ ಶಕ್ತಿಯ ಕಾರಣದಿಂದ ಎಂದು ಕಮೆಂಟ್ ಹಾಕಿದ್ದರು.
ಇದಕ್ಕೆ ಉತ್ತರವಾಗಿ ಇಂದು ಮತ್ತೊಂದು ವೀಡಿಯೋ ಹರಿಯಬಿಟ್ಟ ಅನಿರುದ್ದ್ ರವರು, ” ನಿನ್ನೆ ನಾನು ಸಾಮಾಜಿಕ ಜಾಲತಾಣದಲ್ಲಿ ಸುಳ್ಯ ನಗರದ ಕಸದ ರಾಶಿ ಬಗ್ಗೆ ಹಂಚಿಕೊಂಡಿದ್ದೆ. ಸ್ಥಳೀಯರಲ್ಲಿ, ಅಧಿಕಾರಿಗಳಲ್ಲಿ, ಪ್ರತಿನಿಧಿಗಳಲ್ಲಿ ಕಳಕಳಿಯಿಂದ ಮನವಿ ಮಾಡ್ಕೊಂಡಿದ್ದೆ. ಅದಕ್ಕೆ ಎಲ್ಲಾ ಮಾಧ್ಯಮದವರು ಬೆಂಬಲ ಕೊಟ್ಟಿರುವುದನ್ನು ನೋಡಿ ತುಂಬಾ ಸಂತೋಷವಾಗಿದೆ. ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ. ಅದರ ಜೊತೆಗೆ ಇವತ್ತು ಬೆಳಿಗ್ಗೆ ಫೇಸ್ಬುಕ್ನಲ್ಲಿ ಪಂಚಾಯತ್ ಅಧ್ಯಕ್ಷರು ವಿನಯಕುಮಾರ್ ಕಂದಡ್ಕ ಸಂದೇಶ ಕಳುಹಿಸಿದ್ದಾರೆ. ಫೇಸ್ಬುಕ್ನಲ್ಲಿ ಮನವಿ ಮಾಡಿರೋದ್ರಿಂದ ಸಮಸ್ಯೆ ಬಗೆಹರಿಯುವುದಾದ್ರೆ ದೇಶದಲ್ಲಿ ಯಾವ ಸಮಸ್ಯೆಗಳು ಇರುತ್ತಿರಲಿಲ್ಲ ಎಂದಿದ್ದಾರೆ. ತಮಗೆ ಬಹುಶಃ ಗೊತ್ತಿಲ್ಲ ಕಾಣ್ತದೆ. ಒಂದೂವರೆ ವರ್ಷದಿಂದ ಸ್ವಚ್ಛತಾ ಅಭಿಯಾನದಲ್ಲಿ ನಾನು ಸಹಭಾಗಿಯಾಗಿದ್ದೇನೆ. ಸ್ವಚ್ಛತೆಗಾಗಿ ಸಾಕಷ್ಟು ಪೋಸ್ಟ್ಗಳನ್ನು ಇದುವರೆಗೂ ನಾನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇನೆ. ಸ್ಥಳೀಯರಿಂದ ಮತ್ತು ಅಧಿಕಾರಿಗಳಿಂದ ತುಂಬಾ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಸಕಾರಾತ್ಮಕವಾಗಿ ಪ್ರತಿಕ್ರಿಯೆ ಸಿಕ್ಕಿದೆ. ಯಾರೋ ಕೆಲಸ ಇಲ್ಲದವರು ಅಲ್ಲಿಯ ಜನಪ್ರತಿನಿಧಿಗಳ ಪ್ರಾಮಾಣಿಕ ಪ್ರಯತ್ನವನ್ನು ಅವಲೋಕಿಸದೆ ಪ್ರಚಾರಕ್ಕೋಸ್ಕರ ಮೆಸೇಜ್ ಮಾಡಿದರೆ ಅದನ್ನು ಪೂರ್ವಪರ ಯೋಚಿಸದೆ ಅದನ್ನು ಶೇರ್ ಮಾಡೋದಲ್ಲ ಎಂದಿದ್ದಾರೆ. ದೇವರ ಅನುಗ್ರಹದಿಂದ ಜನರ ಪ್ರೀತಿ ಹಾರೈಕೆ, ಆಶೀರ್ವಾದದಿಂದ ನನಗೆ ಸಾಕಷ್ಟು ಕೆಲಸ ಇದೆ. ನಾನು ಪ್ರಚಾರಕ್ಕೋಸ್ಕರ ಇದು ಮಾಡ್ತಾ ಇಲ್ಲ. ಕಳೆದ ಒಂದೂವರೆ ವರ್ಷದಿಂದ ಈ ಅಭಿಯಾನ ನಡೆಸ್ತಾ ಇದ್ದೇನೆ. ಜೊತೆಗೆ ಒಂದು ದಶಕಗಳಿಂದ ಹೆಚ್ಚಿನ ವರ್ಷಗಳು ನಾನು ಪ್ರಚಾರದಲ್ಲಿದ್ದೇನೆ. ದೇವರ ದಯದಿಂದ ಪ್ರತಿಯೊಂದು ಮನೆಯಲ್ಲಿ, ಮನದಲ್ಲಿ ಇದ್ದೇನೆ. ಜನಮನನ್ನಣೆ ನನಗೆ ಸಿಕ್ಕಿದೆ. ಜನ್ನಮನ್ನಣೆಯಿಂದ ಒಳ್ಳೆಯ ಕೆಲಸಗಳಾಗಲಿ. ಅದಕ್ಕೋಸ್ಕರ ಈ ಪ್ರಯತ್ನ. “ಕಾನೂನು ನಿಯಮಗಳ ಎಲ್ಲಾ ಅಗತ್ಯಗಳನ್ನು ಪೂರೈಸಿ ಕಸ ಸಾಗಾಟಕ್ಕೆ ವ್ಯವಸ್ಥೆ ಆಗುತ್ತಿದೆ. ಊಟ ರೆಡಿ ಆದ ಮೇಲೆ ಬಡಿಸುವುದಕ್ಕೆ ಬಂದಂತವರ ಕತೆ ಆಯ್ತು ಇದು ಅಂತಲೂ ಹೇಳಿದ್ದಾರೆ. ಕಳೆದ ೫ ವರ್ಷದಿಂದ ಈ ಸಮಸ್ಯೆ ಇದೆ. ೫ ವರ್ಷದಿಂದ ಅಡುಗೆ ಆಗ್ತಾ ಇದೆಯಾ? ಹಾಗೇನಾದ್ರೂ ಇದ್ದಲ್ಲಿ ಸಮಸ್ಯೆ ಇದೆ ಅಂತಾನೆ ಅರ್ಥ. ಅದನ್ನು ನಾವು ಎತ್ತಿ ತೋರಿಸಲೇ ಬೇಕು. ಧ್ವನಿ ಎತ್ತಲೇ ಬೇಕು. “ಕಸ ವಿಲೇವಾರಿಗೆ ಅದರದ್ದೇ ಆದ ಕಾನೂನಾತ್ಮಕ ತೊಡಕುಗಳಿವೆ. ಅದನ್ನೆಲ್ಲಾ ನಿವಾರಿಸಿ ಟೆಂಡರ್ ಪ್ರಕ್ರಿಯೆ ಚಾಲೂ ಆಗಿದೆ. ಕಸ ಹೋಗಿಯೇ ಹೋಗುತ್ತದೆ. ಯಾವ ಫೇಸ್ಬುಕ್ ಮನವಿಯ ಕಾರಣದಿಂದಲೂ ಅಲ್ಲ. ನಮ್ಮ ಇಚ್ಛಾಶಕ್ತಿಯ ಕಾರಣದಿಂದ. ” ಎಂದಿದ್ದಾರೆ.
ನನ್ನಿಂದ ಆಯ್ತು ಅನ್ನುವುದು ನನಗೆ ಬೇಕಾಗಿಲ್ಲ. ನಮ್ಮಿಂದ ಆಯ್ತು ಎನ್ನುವುದು ನನಗೆ ಬೇಕು. ಇವತ್ತು ಈ ಪೋಸ್ಟ್ನಿಂದ ಮಾಧ್ಯಮದವರ ಸೇರಿದ್ರಿಂದ ಇದಕ್ಕೆ ಪರಿಹಾರ ಸಿಕ್ಕಿದೆ ಸಂತೋಷ. ಇನ್ನೊಂದು ಮೆಸೇಜ್ ನೋಡಿದೆ. ಅನಿರುದ್ಧ್ಗೆ 1೦ ಲಾರಿ ಕಳಿಸಿಕೊಡಿ. ಫೇಸ್ಬುಕ್ ವೀಡಿಯೋದಿಂದ ಈ ಸಮಸ್ಯೆ ಬಗೆಹರಿಯಲ್ಲ. ಅದಕ್ಕೆ ನಾನೂ ಉತ್ತರ ಕೊಟ್ಟಿದ್ದೇನೆ. ನಿಮಿಗೆ ಯಾವಾಗ ಬೇಕು ಅಂತ ಹೇಳಿ ನಿಮಗೆ 1೦ ಲಾರಿ ಕಳಿಸಿಕೊಡ್ತೇನೆ. ಈ ಸಮಸ್ಯೆ ಬಗ್ಗೆ ನಾನು ಸಾಕಷ್ಟು ಕೇಳಿದ್ದೇನೆ, ವಿಚಾರಿಸಿದ್ದೇನೆ. ನನ್ನ ಹತ್ರ ಈಗ ಸಾಕಷ್ಟು ಪುರಾವೆಗಳು ಇವೆ. ಬೇಕಾದ್ರೆ ಎಲ್ಲಾ ಪುರಾವೆಗಳನ್ನು ಒಂದೊಂದು ಹಂಚಿಕೊಳ್ಳುತ್ತಾ ಹೋಗ್ತೇನೆ. ಸಮಸ್ಯೆ 5 ವರ್ಷಗಳಿಂದ ಇದೆ. ಯಾರನ್ನೂ ದೂಷಿಸುವ ಅಗತ್ಯ ಇಲ್ಲ. ಪ್ರೀತಿಯಿಂದ ಕೈಜೋಡಿಸಿ ಈ ಸಮಸ್ಯೆಯನ್ನು ಬಗೆಹರಿಸಿ. ನಮ್ಮ ಬಡಾವಣೆ, ನಮ್ಮ ನಗರ ನಮ್ಮ ದೇಶ ಬೇರೆ ದೇಶಗಳಿಗೆ ಮಾದರಿಯಾಗಬೇಕು, ಆ ನಿಟ್ಟಿನಲ್ಲಿ ನಾವೆಲ್ಲರೂ ಸೇರಬೇಕು. ” ಎಂದು ವಿವರವಾಗಿ ಹೇಳಿದ್ದಾರೆ.