ಕಾಂಗ್ರೆಸ್ ಮಹಿಳಾ ಸಮಾವೇಶ : ಸುಳ್ಯದಲ್ಲಿ ಪೂರ್ವಭಾವಿ ಸಭೆ
ಪಕ್ಷದಲ್ಲಿ ಅವಕಾಶ ಪಡೆದ ಮತ್ತು ಅವಕಾಶ ವಂಚಿತ ಎಲ್ಲ ಮಹಿಳೆಯರೂ ಕೂಡಾ ನಾಯಕಿಯರೇ. ನಾ… ನಾಯಕಿ ಸಮಾವೇಶದ ಉದ್ದೇಶ ಇದುವೇ. ಇದು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ರ ಕಲ್ಪನೆ ಎಂದು ಮಾಜಿ ಸಚಿವೆ, ಕಾಂಗ್ರೆಸ್ ನಾ… ನಾಯಕಿ ಸಮಾವೇಶದ ರಾಜ್ಯ ಸಂಚಾಲಕಿ ಶ್ರೀಮತಿ ಉಮಾಶ್ರೀ ಹೇಳಿದರು.
ಕಾಂಗ್ರೆಸ್ ನಾ… ನಾಯಕಿ ಸಮಾವೇಶದ ಕುರಿತು ಮೇ.11 ರಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
ಗ್ರಾ.ಪಂ., ತಾ.ಪಂ., ಜಿ.ಪಂ. ನ ಹಾಲಿ ಸದಸ್ಯರು, ಮಾಜಿ ಸದಸ್ಯರು, ಚುನಾವಣೆಯಲ್ಲಿ ಸ್ಪರ್ಧಿಸಿದವರು, ಪಕ್ಷದಲ್ಲಿ ಅವಕಾಶ ವಂಚಿತರಾದವರು ಹೀಗೆ ಎಲ್ಲರನ್ನು ಪಕ್ಷದಲ್ಲಿ ಮುಖ್ಯ ವಾಹಿನಿಗೆ ತರಬೇಕು. ಎಲ್ಲ ಮಹಿಳೆಯರೂ ನಾಯಕಿಯರಾಗಬೇಕು ಎಂಬ ನಿಟ್ಟಿನಲ್ಲಿ ನಾ… ನಾಯಕಿ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಮಾವೇಶದ ಎಲ್ಲ ಕೆಲಸವನ್ನು ಮಹಿಳೆಯರೇ ನಿರ್ವಹಿಸಲಿದ್ದಾರೆ. ಜತೆಗೆ ಪಕ್ಷ ಸಂಘಟನೆಯನ್ನು ಎಲ್ಲರೂ ಸೇರಿ ಮಾಡೋಣ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಇರುವ ಬಿಜೆಪಿ ಸರಕಾರ ಜನಪರವಾಗಿ ಕೆಲಸ ಮಾಡುತ್ತಿಲ್ಲ. ಸಬ್ಸಿಡಿ ಸಾಲ, ಸಾಲಮನ್ನಾ ನಿಲ್ಲಿಸಿದ್ದಾರೆ. ಶಾಲಾ ಮಕ್ಕಳಿಗೆ ಶೂ ಇತ್ಯಾದಿ ಸವಲತ್ತು ಸಿಗುತ್ತಿತ್ತು.ಅದನ್ನೂ ನಿಲ್ಲಿಸಿ ಮಕ್ಕಳಿಗೆ ಅನ್ಯಾಯ ಮಾಡಿದೆ. ಇಂತ ದುಷ್ಟ ಸರಕಾರವನ್ನು ಕಿತ್ತೊಗೆದು ಜನರ ಪರ ಕಾಳಜಿ ಇರುವ ಕಾಂಗ್ರೆಸ್ ನ್ನು ಇಲ್ಲಿ ಅಧಿಕಾರಕ್ಕೆ ತರಲು ಎಲ್ಲರೂ ಶ್ರಮಿಸೋಣ ಎಂದು ಉಮಾಶ್ರೀ ಹೇಳಿದರು.
ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿ, ಪ್ರತಿಯೊಬ್ಬರಿಗೂ ಅಮ್ಮ ನಾಯಕಿಯಾಗುತ್ತಾಳೆ. ಅವರ ಆದರ್ಶಗಳು ನಮಗೆ ಮಾರ್ಗದರ್ಶನ. ಅದೇ ರೀತಿ ಪ್ರತಿಯೊಬ್ಬ ಹೆಣ್ಣ ಮಗಳು ನಾಯಕಿಯಾಗಬೇಕೆಂಬ ದೃಷ್ಟಿಯಿಂದ ನಾ.. ನಾಯಕಿ ಕಾರ್ಯಕ್ರಮ ಆಯೋಜನೆಗೊಂಡಿದೆ. ಸಂವಿಧಾನವನ್ನು ಸಮರ್ಪಕವಾಗಿ ಜಾರಿಗೊಳಿಸಿದ್ದು, ಮಹಿಳೆಯರಿಗೆ ಶೇ.50 ಮೀಸಲಾತಿ, ಸಮಾನ ಅವಕಾಶ ಕೊಟ್ಟದ್ದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಮಹಿಳೆಯರಿಗೆ ನೀಡಿದಷ್ಟು ಅವಕಾಶ ಬಿಜೆಪಿ ನೀಡಿಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಂಟ್ ಪಿಂಟೋ ಮಾತನಾಡಿ, “ಪಕ್ಷ ಸಂಘಟನೆ ಈ ಭಾಗದಲ್ಲಿ ಇದೆ. ಆದರೆ ಇಲ್ಲಿ ಪಕ್ಷದಲ್ಲಿ ಸಕ್ರಿಯವಾಗಿ ದುಡಿದ ಮಹಿಳೆಯರಿಗೆ ಉತ್ತಮ ಸ್ಥಾನಗಳು ಸಿಗುತ್ತಿಲ್ಲ. ಅದನ್ನು ಕೊಡುವ ಕೆಲಸಗಳು ಆಗಬೇಕು ಎಂದು ಹೇಳಿದರು.
ಕೆ.ಪಿ.ಸಿ.ಸಿ. ಮಹಿಳಾ ಘಟಕ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮಂಜುಳಾ ನಾಯ್ಡು, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಕೆ.ಪಿ.ಸಿ.ಸಿ. ಸಂಯೋಜಕ ಕೃಷ್ಣಪ್ಪ ಜಿ, ಕೆ.ಪಿ.ಸಿ.ಸಿ. ಸದಸ್ಯ ಡಾ. ರಘು, ಕಡಬ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್, ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿಗಳಾದ ಎಂ.ವೆಂಕಪ್ಪ ಗೌಡ,ಟಿ.ಎಂ. ಶಹೀದ್ , ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ್, ಕೆ.ಪಿ.ಸಿ.ಸಿ. ಮಾಧ್ಯಮ ವಕ್ತಾರ ಶೌವಾದ್ ಗೂನಡ್ಕ, ಯೂತ್ ಕಾಂಗ್ರೆಸ್ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಎನ್.ಎಸ್.ಯು.ಐ. ಅಧ್ಯಕ್ಷ ಕೀರ್ತನ್ ಕೊಡಪಾಲ ಮೊದಲಾದವರು ಇದ್ದರು.
ಲಕ್ಷ್ಮೀ ಸುಬ್ರಹ್ಮಣ್ಯ ಪ್ರಾರ್ಥಿಸಿದರು. ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್ ಸ್ವಾಗತಿಸಿದರು. ಉಷಾ ಅಂಚನ್ ಕಾರ್ಯಕ್ರಮ ನಿರೂಪಿಸಿದರು.