ಕ್ರಮಕ್ಕೆ ಸಹಕಾರ ಇಲಾಖಾಧಿಕಾರಿಗಳಿಗೆ ಸರಕಾರ ಸೂಚನೆ
ಸಾಲಮನ್ನಾ ಬಾಕಿ ಇರುವ ಅರ್ಹ ರೈತರಿಗೆ ಇನ್ನೂ ಹಣ ಬಿಡುಗಡೆಯಾಗದಿರುವ ಕುರಿತು ಕ್ರಮ ಕೈಗೊಳ್ಳುವಂತೆ ಸುಳ್ಯ ಸಿ.ಎ. ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆಯವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಮಾಡಿದ್ದು, ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಹಕಾರ ಇಲಾಖಾ ಅಧಿಕಾರಿಗಳಿಗೆ ಸರಕಾರ ಸೂಚನೆ ನೀಡಿದೆ.
2018ರ ಸಾಲಮನ್ನಾ ಘೋಷಣೆ ಮಾಡಿ ತಂತ್ರಾಂಶದ ಮೂಲಕ ಮಾಹಿತಿ ಸಂಗ್ರಹಣೆ ಕೆಲಸ ಮಾಡಿತ್ತು. ಈ ಸಂದರ್ಭದಲ್ಲಿ ನಮ್ಮ ಸಂಘದಲ್ಲಿ ಒಟ್ಟು 901 ಸದಸ್ಯರಿಗೆ ಸಾಲ ಇದ್ದು ಈ ಪೈಕಿ 167 ಅರ್ಜಿಗಳು ಸುತ್ತೋಲೆಯ ಷರತ್ತುಗಳಿಗೆ ಸಂಬಂಧಿಸಿ ತಿರಸ್ಕೃತಗೊಂಡಿದೆ. 684 ಮಂದಿ ರೈತರ ಖಾತೆಗೆ ಹಣ ಜಮೆ ಆಗಿದ್ದು, ಇನ್ನುಳಿದ 50 ಅರ್ಹ ರೈತರಿಗೆ ಇದುವರೆಗೆ ಸಾಲಮನ್ನಾ ಸೌಲಭ್ಯ ದೊರೆತಿಲ್ಲ. ಆದ್ದರಿಂದ ಈ ಸಮಸ್ಯೆ ಯನ್ನು ಪರಿಹರಿಸಿ ಅರ್ಹ ರೈತರಿಗೆ ಹಣ ಬಿಡುಗಡೆ ಮಾಡಬೇಕೆಂದು ಹರೀಶ್ಬೂಡುಪನ್ನೆಯವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಮಾಡಿಕೊಂಡಿದ್ದರು.
ಈ ಮನವಿಯ ಹಿನ್ನಲೆಯಲ್ಲಿ ಸರಕಾರದ ಅಧೀನ ಕಾರ್ಯದರ್ಶಿ ಗಳು ಸಹಕಾರ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದು ಹರೀಶ್ ಬೂಡುಪನ್ನೆ ಅಧ್ಯಕ್ಷರು ಸುಳ್ಯ ಸಿ.ಎ. ಬ್ಯಾಂಕ್ ಇವರ ಮನವಿಯನ್ನು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.