ಅಡಿಕೆ ಹಳದಿ ಎಲೆ ರೋಗ ಬಂದು ಸುಳ್ಯ ತಾಲೂಕಿನ ಬಹುಭಾಗ ಕೃಷಿ ಆಹುತಿಯಾಗಿದೆ. ರೈತರು ಕಂಗಾಲಾಗಿದ್ದಾರೆ ಆದ್ದರಿಂದ ರೋಗ ಪೀಡಿತ ಪ್ರದೇಶದ ಸರ್ವೆ ನಡೆಸಿ ಅಂಕಿಅಂಶ ಸಂಗ್ರಹಿಸಿ ರೈತರಿಗೆ ಪರಿಹಾರ ನೀಡಬೇಕು ಮತ್ತು ಒಂದು ಬಾರಿಗೆ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಸುಳ್ಯ ತಾಲೂಕಿ ಘಟಕ ಸರಕಾರವನ್ನು ಒತ್ತಾಯಿಸಿದೆ.
ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರೈತ ಸಂಘದ ಅಧ್ಯಕ್ಷ ಲೋಲಾಕ್ಷ ಭೂತ ಕಲ್ಲು, ಗೌರವಾಧ್ಯಕ್ಷ ನೂಜಾಲು ಪದ್ಮನಾಭ ಗೌಡ, ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಕೆ , ರೈತರ ಸಮಸ್ಯೆಗಳ ವಿವರ ನೀಡಿದರು.
ಇತ್ತಿಚೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರೈತ ಸಂಘದ ಸಭೆ ಕರೆಯಲಾಗಿತ್ತು. ನಾವು ತಾಲೂಕಿನ ಕೃಷಿ ಸಮಸ್ಯೆಗಳನ್ನು ಮನವರಿಕೆ ಮಾಡಿದ್ದೆವೆ. ಇನ್ನು ಅತಿ ಶೀಘ್ರದಲ್ಲಿ ಸುಳ್ಯದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ರೈತರ ಸಭೆ ಸಡೆಯಲಿದೆ. ನಾವು ಅಲ್ಲಿ ಎಲೆ ಹಳದಿ ರೊಗದ ಬಗ್ಗೆ ಪ್ರಸ್ಥಾಪಿಸಿದೆವು. ಈಗ ಅದು ಬೇರೆ-ಬೇರೆ ಕೃಷಿಗೂ ಹರಡುತ್ತಿದೆ, ಆ ಜಾಗದಲ್ಲಿ ಯಾವ ಕೃಷಿಯೂ ಆಗುತ್ತಿಲ್ಲ. ದಕ್ಷಿಣ ಕನ್ನಡಕ್ಕೆ ಸುಮಾರು 16 ಕೋಟಿ ರೂಪಾಯಿಗಳ ಪರಿಹಾರ ಬರಲು ಬಾಕಿ ಇದೆ. ಗ್ರೀನ್ ಲಿಸ್ಟನಲ್ಲಿ 6 ಕೋಟಿ ರೂಪಾಯಿ ಬರಲು ಬಾಕಿ ಇದೆ. ಒಟ್ಟು ಸರಕಾರದಿಂದ 24 ಕೋಟಿ ಬರಲಿದೆ. ಅದರಲ್ಲಿ ಹೆಚ್ಚು ಸುಳ್ಯದ ಪಾಲು ಎಂದು ಲೋಲಜಾಕ್ಷ ಭೂತಕಲ್ಲು ಹೇಳಿದರು.
ನೂಜಾರು ಪದ್ಮನಾಭ ಗೌಡ ಮಾತನಾಡಿ, ಇಂದಿನ ದುಬಾರಿ ದುನಿಯಾದಲ್ಲಿ ರೈತರಿಗೆ ಕೃಷಿಕಾರ್ಯಗಳನ್ನು ನಿರ್ವಹಿಸಲು ಕಷ್ಟವಾಗುತ್ತಿದೆ. ಸರಕಾರವು ರಸಗೊಬ್ಬರ, ಮೈಲುತುತ್ತು ಮತ್ತು ಕೀಟನಾಶಕಗಳಿಗೆ ಶೇಕಡಾ ೫೦ರಷ್ಟು ಸಬ್ಸಿಡಿ ನೀಡಬೇಕು. ವಿದ್ಯುತ್ ಅನ್ನು ಯಥಾ ಪ್ರಕಾರ ಉಚಿತವಾಗಿ ಪೂರೈಸಬೇಕು. ಸೋಲಾರು ಪಂಪು ಅಳವಡಿಸುವ ರೈತರಿಗೆ ಸಂಪೂರ್ಣ ಸಹಾಯಧನ ನೀಡಬೇಕು. ಕೃಷಿ ಯಂತ್ರೋಪಕರಣಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಮತ್ತು ಇಂಧನಕ್ಕೆ 50 ರಷ್ಟು ಸಹಾಯಧನ ನೀಡಬೇಕು ಎಂದು ಆಗ್ರಹಿಸಿದರು.
ಕೋವಿ ಪರವಾನಗಿ ನವೀಕರಣಕ್ಕೆ ಅತಿರೇಕದ ದರ ವಿಧಿಸುತ್ತಿದ್ದಾರೆ.ಅರ್ಹ ರೈತರಿಗೆ ಕೋವಿ ಪರವಾನಗಿ ನೀಡುವ ಅಧಿಕಾರ ತಹಶೀಲ್ದಾರರಿಗೆ ನೀಡಬೇಕು. ಜಿಲ್ಲಾಧಿಕಾರಿಗಳ ಆದೇಶ ವಿಳಂಬವಾಗುತ್ತಿದೆ.ಇದರಿಂದ ರೈತರಿಗೆ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು.
ಪೆರಾಜೆ ಗ್ರಾಮ ಸಮಿತಿಯ ಉಪಾಧ್ಯಕ್ಷ ಗೋಪಾಲ್ ಪೆರಾಜೆ ಮಾತನಾಡಿ, ೧೮೩೭ರ ಸ್ವಾತಂತ್ರ್ಯ ಹೋರಾಟವು ರೈತ ಬಂಡಾಯವೆಂದು ಪ್ರಸಿದ್ಧ. ಈ ಬಂಡಾಯಕ್ಕೆ ಕೊಡುಗೆ ನೀಡಿದ ಮುಖ್ಯ ಸ್ಥಳಗಳಲ್ಲಿ ಸ್ಮಾರಕ ನಿರ್ಮಿಸುವುದು ನಮ್ಮ ಧ್ಯೇಯ. ಈ ವಿಚಾರವಾಗಿ ರೈತಸಂಘದ ಎಲ್ಲಾ ವೇದಿಕೆಗಳಲ್ಲಿ ಚರ್ಚೆಯಾಗಿದೆ. ಇದೇ ತಿಂಗಳ 30 ರಂದು ಎಪಿಯಂಸಿ ಹಾಲ್ನಲ್ಲಿ ರೈತ ಹೋರಾಟಕ್ಕೆ ಕೊಡುಗೆ ನೀಡಿದ ಮನೆತನಗಳ ಉತ್ಸಾಹಿ ಸದಸ್ಯರೊಂದಿಗೆ ಕಾರ್ಯಕ್ರಮ ನಡೆಸಲಿದ್ದೆವೆ. ಈ ಕುರಿತಾಗಿ ಅಗೋಸ್ಟ್ ತಿಂಗಳಲ್ಲಿ ಜಾಥಾ, ವಿಚಾರಗೋಸ್ಟಿಗಳು ನಡೆಯಲಿವೆ. ಇದ್ದಕ್ಕೆ ಎಲ್ಲರ ಸಹಕಾರ ಬೇಕೆಂದು ಅವರು ಮನವಿ ಮಾಡಿದರು.
ರೈತಸಂಘದ ಸುಳ್ಯ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಕೆ ಮಾತನಾಡಿ ರೈತರನ್ನು ಸರಕಾರ ಸದಾ ಪ್ರೋತ್ಸಾಹಿಸಬೇಕು ಎಂದು ಒತ್ತಾಯಿಸಿದರು. ಐವರ್ನಡು ಗ್ರಾಮ ಸಮಿತಿಯ ಮಂಜುನಾಥ್ ಮಡ್ತಿಲ ಉಪಸ್ಥಿತರಿದ್ದರು.