ಸಂಘಟನಾ ಶಕ್ತಿಯ ಮೂಲಕ ಭಕ್ತಿ ನಂಬಿಕೆಗಳು ಉಳಿದರೆ ಬ್ರಹ್ಮಕಲಶೋತ್ಸವ ಯಶಸ್ವಿ: ಸಚಿವ ಎಸ್. ಅಂಗಾರ
ದೇವರ ಮೇಲೆ ಭಕ್ತಿ ಇದ್ದರೆ ಕಲ್ಲು ಕೂಡಾ ದೇವರಾಗಲು ಸಾಧ್ಯ: ಪ್ರಕಾಶ್ ಮಲ್ಪೆ
ಅರಂತೋಡು ಗ್ರಾಮದ ತೋಟಂಪಾಡಿ ಶ್ರೀ ಉಳ್ಳಾಕುಳು ದೈವಸ್ಥಾನದ ಶ್ರೀ ಉಳ್ಳಾಕುಳು, ಉಳ್ಳಾಲ್ತಿ ಮತ್ತು ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವವು ಜರುಗುತ್ತಿದ್ದು, ಧಾರ್ಮಿಕ ಸಭಾ ಕಾರ್ಯಕ್ರಮವು ಮೇ.13ರಂದು ರಾತ್ರಿ ಜರುಗಿತು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಯು.ಎಸ್. ಮೇದಪ್ಪ ಉಳುವಾರು ಅವರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅವರು ಉದ್ಘಾಟಿಸಿ, ಮಾತನಾಡಿ ಸಂಘಟನಾ ಶಕ್ತಿಯ ಜೊತೆಗೆ ಭಕ್ತಿ ನಂಬಿಕೆಗಳಿದ್ದರೆ ಬ್ರಹ್ಮಕಲಶೋತ್ಸವಗಳು ಯಶಸ್ವಿಯಾಗಲು ಸಾಧ್ಯವಿದೆ ಎಂದರು.
ಭಕ್ತಿ ಮತ್ತು ನಂಬಿಕೆಯೇ ದೇವರು ಮತ್ತು ದೈವಾರಾಧನೆಯ ಶಕ್ತಿ. ಅವಕಾಶಗಳು ದೊರೆತಾಗ ಇಂತಹ ಉತ್ತಮ ಕಾರ್ಯಗಳ ಮೂಲಕ ಸದುಪಯೋಗಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಧಾರ್ಮಿಕ ಚಿಂತಕ ಪ್ರಕಾಶ್ ಮಲ್ಪೆ ಅವರು ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ “ದೈವ, ದೇವರ ಮೇಲೆ ಭಕ್ತಿ ಹಾಗೂ ನಂಬಿಕೆಗಳಿದ್ದರೆ ಕಲ್ಲು ಕೂಡಾ ದೇವರಾಗಲು ಸಾಧ್ಯ. ಮಕ್ಕಳಿಗೆ ಚಿಕ್ಕಂದಿನಲ್ಲೇ ದೈವ ಹಾಗೂ ದೇವರ ಮೇಲೆ ಭಕ್ತಿ ನಂಬಿಕೆ ಇರುವಂತೆ ಮಾಡಬೇಕು. ಆಗ ಮುಂದಿನ ದಿನಗಳಲ್ಲಿ ಆತ ದೇವರು ಮೆಚ್ಚಿದ ವ್ಯಕ್ತಿಯಾಗಿರುತ್ತಾನೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ. ಕೆ.ವಿ. ರೇಣುಕಾಪ್ರಸಾದ್, ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕ, ಬ್ರಹ್ಮಕಲಶೋತ್ಸವ ಸಮಿತಿ ಪ್ರ.ಕಾರ್ಯದರ್ಶಿ ಹಾಗೂ ಅರಂತೋಡು – ತೊಡಿಕಾನ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಅರಂತೋಡು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಹರಿಣಿ ಡಿ., ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡ ಅಧ್ಯಕ್ಷ ಸೋಮಶೇಖರ ಪೈಕ, ಅರಂತೋಡು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ, ಸುಳ್ಯ ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಮರ್ಕಂಜ ಪಂಚಸ್ಥಾಪನೆ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಾಘವ ಕಂಜಿಪಿಲಿ, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಅರಂತೋಡು ವಾಹನ ಚಾಲಕ ಮಾಲಕ ಸಂಘದ ಅಧ್ಯಕ್ಷ ಮೋಹನ ಪೆರುಂಗೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ದೈವಸ್ಥಾನದ ಕಾಂಕ್ರೀಟ್ ರಸ್ತೆ, ಆವರಣಗೋಡೆ ಮತ್ತು ಇಂಟರ್ ಲಾಕ್ ನಿರ್ಮಾಣಕ್ಕೆ ವಿಶೇಷ ಅನುದಾನ ನೀಡಿ, ಉದ್ಘಾಟಿಸಿದ ಸಚಿವ ಎಸ್. ಅಂಗಾರ ಹಾಗೂ ದೈವಸ್ಥಾನದ ಆನೆ ಮೆಟ್ಟಿಲು ನಿರ್ಮಾಣಕ್ಕೆ ರೂ. ಮೂರು ಲಕ್ಷಕ್ಕೂ ಅಧಿಕ ಧನಸಹಾಯ ನೀಡಿದ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ. ಕೆ.ವಿ. ರೇಣುಕಾಪ್ರಸಾದ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ದೈವಸ್ಥಾನದ ನಿರ್ಮಾಣ ಕಾರ್ಯದಲ್ಲಿ ತೊಡಗಿದ ಹಲವರನ್ನು ಹಾಗೂ ದೈವಸ್ಥಾನದ ಅಭಿವೃದ್ಧಿಗಾಗಿ ರೂ. ಒಂದು ಲಕ್ಷಕ್ಕೂ ಹೆಚ್ಚು ಧನಸಹಾಯ ನೀಡಿದವರನ್ನು, ದೈವಸ್ಥಾನದ ಸ್ಥಳಧಾನಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಪ್ರ.ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ ವಂದಿಸಿದರು. ಮಹಿಳಾ ಸ್ವಾಗತ ಸಮಿತಿ ಸಂಚಾಲಕಿ ಶ್ರೀಮತಿ ಪುಷ್ಪಾಮೇದಪ್ಪ ಪ್ರಾರ್ಥಿಸಿದರು.