ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ದ್ವಿತೀಯ ವರ್ಷದ ವಿಜ್ಞಾನ ವಿದ್ಯಾರ್ಥಿ ಅನುಷ್ ಎ.ಎಲ್. ಅವರು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆಸಿದ ಎನ್.ಡಿ.ಎ (ನ್ಯಾಶನಲ್ ಡಿಫೆನ್ಸ್ ಅಕಾಡೆಮಿ) ಎನ್ 1 ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಗುತ್ತಿಗಾರಿನ ಮೆಸ್ಕಾಂನಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕಡಬದ ಎಣ್ಣೆಮಜಲಿನ ಲೋಕೇಶ್ ಎ. ಹಾಗೂ ಉಷಾ ಬಿ. ದಂಪತಿ ಪುತ್ರರಾಗಿರುವ ಅನುಷ್, ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಎಸ್.ಎಸ್.ಎಲ್. ಸಿ. ಪೂರೈಸಿದ್ದು, ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದರು. ಬಳಿಕ ಅಂಬಿಕಾ ವಿದ್ಯಾಲಯದಲ್ಲಿ ಪಿ.ಯು.ಸಿ. ಗೆ ಸೇರಿದ್ದರು.
ನ್ಯಾಶನಲ್ ಡಿಫೆನ್ಸ್ ಅಕಾಡೆಮಿಯು ಪ್ರತಿವರ್ಷವೂ ಎರಡು ಬಾರಿ ಪರೀಕ್ಷೆಗಳನ್ನು ನಡೆಸಿ, ಭೂಸೇನೆ, ವಾಯುಸೇನೆ ಹಾಗೂ ನೌಕಾಸೇನೆಯಲ್ಲಿನ ವಿವಿಧ ಪದವಿ ಕೋರ್ಸ್ಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ತದನಂತರ ಆಯಾ ಮಿಲಿಟರಿ ದಳದಲ್ಲಿ ಉದ್ಯೋಗವನ್ನು ಕಲ್ಪಿಸಿಕೊಡುತ್ತದೆ. ಈ ನೆಲೆಯಲ್ಲಿ ಈ ವರ್ಷ ನಡೆದ ಪರೀಕ್ಷೆಗೆ ಅನುಷ್ ಹಾಜರಾಗಿ ಮೊದಲ ಹಂತದ ಲಿಖಿತ ಪರೀಕ್ಷೆಯನ್ನು ಪೂರ್ಣಗೊಳಿಸಿ, ಮುಂದೆ ಸರ್ವಿಸ್ ಸೆಲೆಕ್ಷನ್ ಬೋರ್ಡ್ (ಎಸ್ಎಸ್ಬಿ) ನಡೆಸುವ ಮೌಖಿಕ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ. ಸುಮಾರು 5 ಲಕ್ಷ ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಕೇವಲ 8 ಸಾವಿರ ಮಂದಿಯಷ್ಟೇ ಈ ಲಿಖಿತಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ.
ಅಂಬಿಕಾ ಶಿಕ್ಷಣ ಸಂಸ್ಥೆಗಳು ಕಳೆದ ಶೈಕ್ಷಣಿಕ ವರ್ಷದಿಂದ ಎನ್ಡಿಎ ಪರೀಕ್ಷೆಗಳ ಬಗೆಗೆ ಕೋಚಿಂಗ್ ಆರಂಭಿಸಿದ್ದು, ಮೊದಲ ಬ್ಯಾಚ್ನಲ್ಲೇ ಪರೀಕ್ಷೆ ತೇರ್ಗಡೆಯಾಗುವ ಮೂಲಕ ದಾಖಲೆ ಸೃಷ್ಟಿಸಿದಂತಾಗಿದೆ. ಐದನೆಯ ತರಗತಿಯಿಂದ ಪಿಯು ಹಂತದವರೆಗಿನ ಆಸಕ್ತ ವಿದ್ಯಾರ್ಥಿಗಳಿಗೆ ನಿರಂತರ ತರಬೇತಿ ನೀಡಲಾಗುತ್ತಿದೆ. ವಿವಿಧ ಸೇನಾ ಅಧಿಕಾರಿಗಳು, ಮಾಜಿ ಸೈನ್ಯಾಧಿಕಾರಿಗಳು ವಿವಿಧ ಸಂದರ್ಭಗಳಲ್ಲಿ ಆಗಮಿಸಿ ಎನ್ಡಿಎ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಪ್ರೇರಣೆ ಹಾಗೂ ಮಾರ್ಗದರ್ಶನ ಒದಗಿಸುತ್ತಿದ್ದಾರೆ.