ಟೀಕೆಗಳಿಗೆ ಅಂಜದೆ ಮುನ್ನಡೆದರೆ ಸಾಧನೆ ಸಾಧ್ಯ : ಸಚಿವ ಅಂಗಾರ ಅಭಿಮತ
ಯುವಜನ ಮಂಡಳಿ ಕಲಾ ಸದನ ಅಭಿವೃದ್ದಿಗೆ ಹತ್ತು ಲಕ್ಷ ರೂ. ಘೋಷಣೆ
ಯುವಜನ ಸಂಯುಕ್ತ ಮಂಡಳಿ ಸುಳ್ಯ ತಾಲೂಕು ಹಾಗೂ ಯುವಜನ ಸೇವಾ ಸಂಸ್ಥೆ ಸುಳ್ಯ ಇದರ ಆಶ್ರಯದಲ್ಲಿ ಯುವ ಸಂಭ್ರಮ – 2022 ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಯುವ ಸಾಧಕ ಮತ್ತು ಸಂಸ್ಥೆಗಳಿಗೆ ಸನ್ಮಾನ ಕಾರ್ಯಕ್ರಮ ಇಂದು ಕೆ.ವಿ.ಜಿ.ಪುರಭವನದಲ್ಲಿ ನಡೆಯಿತು.
ಸಚಿವ ಎಸ್.ಅಂಗಾರ ಕಾರ್ಯಕ್ರಮ ಉದ್ಘಾಟಿಸಿದರು. ದೇಶದ ಹಿತಕ್ಕಾಗಿ ಕಾರ್ಯ ಸಾಧನೆ ಮಾಡುವ ದೊಡ್ಡ ಜವಾಬ್ದಾರಿ ಯುವ ಜನತೆಯ ಮೇಲಿದೆ. ಸಾಧನೆಗೆ ಹೊರಟಾಗ ಸವಾಲುಗಳು ಎದುರಾಗುವುದು ಸಹಜ. ಆದರೆ ನಮ್ಮ ಗುರಿ , ಉದ್ದೇಶ ಸ್ಪಷ್ಟವಿದ್ದರೆ ಯಾವ ಟೀಕೆ, ಅಡೆ ತಡೆ, ಅಪಸ್ವರ ಗಳಿಗೂ ಅಂಜಬೇಕಿಲ್ಲ . ಅಂಥವರಿಂದ ಮಾತ್ರ ಸಾಧನೆ ಸಾಧ್ಯ ಎಂದರು.
ಸಮಾರಂಭಕ್ಕೂ ಮುನ್ನ ಯುವ ಜನ ಸಂಯುಕ್ತ ಮಂಡಳಿಯ ಮೇಲಂತಸ್ತಾದ ಕಲಾ ಸದನವನ್ನು ಉದ್ಘಾಟಿಸಿದ ಸಚಿವರು, ಸಮಾರಂಭದಲ್ಲಿ ಮಾತನಾಡುವ ವೇಳೆ ಕಲಾಭವನದ ಅಭಿವೃದ್ಧಿಗೆ ಹತ್ತು ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದರು.
ಯುವಜನ ಸಂಯುಕ್ತ ಅಧ್ಯಕ್ಷ ದಯಾನಂದ ಕೇರ್ಪಳ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ಕೆ.ವಿ.ರೇಣುಕಾ ಪ್ರಸಾದ್ ಸನ್ಮಾನ ನೆರವೇರಿಸಿದರು. ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವ ಅನಿವಾರ್ಯತೆ ಯುವ ಜನರ ಮೇಲಿದೆ. ಸುಳ್ಯದ ಯುವ ಶಕ್ತಿ ಈ ಕಾರ್ಯ ಮಾಡುತ್ತಲೇ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಅತಿಥಿಗಳಾಗಿದ್ದರು.
ಕಾರ್ಯಕ್ರಮದಲ್ಲಿ ಸಂಘಟನೆ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಸಮಾಜ ಸೇವಕ ಪುರುಷೋತ್ತಮ ಕೋಲ್ಚಾರು, ಶೈಕ್ಷಣಿಕ ಸಾಧನೆಗಾಗಿ ಭೂ ವಿಜ್ಞಾನಿ ಕು| ಸಂಧ್ಯಾಕುಮಾರಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಾಯಕ ಸುಭಾಶ್ ಡಿ.ಕೆ., ಯೋಗ ಕ್ಷೇತ್ರದಲ್ಲಿ ಯೋಗ ಪಟು ಶರತ್ ಮರ್ಗಿಲಡ್ಕರನ್ನು ಸನ್ಮಾನಿಸಲಾಯಿತು. ರಾಜ್ಯಪ್ರಶಸ್ತಿ ಪುರಸ್ಕ್ರತವಾದ ಪಂಜ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಹಾಗೂ ಶೌರ್ಯ ಯುವತಿ ಮಂಡಲ ಪೈಲಾರು ಸಂಸ್ಥೆಯನ್ನು ಗೌರವಿಸಲಾಯಿತು. ಯುವ ಜನ ಸಂಯುಕ್ತ ಮಂಡಳಿ ಮತ್ತು ಯುವ ಜನ ಸೇವಾ ಸಂಸ್ಥೆ ಪರವಾಗಿ ಡಾ. ಕೆ.ವಿ.ರೇಣುಕಾ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಯುವ ಸದನ ಮತ್ತು ಕಲಾ ಸದನ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಪೂರ್ಣ ಸಹಕಾರ ನೀಡಿದ ಹರೀಶ್ ರೈ ಉಬರಡ್ಕ ಹಾಗೂ ಯುವ ಜನ ಸಂಯುಕ್ತ ಮಂಡಳಿಗೆ ಮಾರ್ಗದರ್ಶನ ನೀಡುತ್ತಿರುವ ಯುವ ಜನ ಸೇವಾ ಸಂಸ್ಥೆಯ ನಿರ್ದೇಶಕ ದಿನೇಶ್ ಮಡಪ್ಪಾಡಿಯವರನ್ನು ಸನ್ಮಾನಿಸಲಾಯಿತು.
ಯುವ ಜನ ಸೇವಾ ಸಂಸ್ಥೆ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವ ಜನ ಸಂಯುಕ್ತ ಮಂಡಳಿ ಉಪಾಧ್ಯಕ್ಷ ತೇಜಸ್ವಿ ಕಡಪಳ ಸ್ವಾಗತಿಸಿದರು. ಯುವ ಜನ ಸೇವಾ ಸಂಸ್ಥೆ ನಿರ್ದೇಶಕ ದಿನೇಶ್ ಮಡಪ್ಪಾಡಿ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಆರ್.ಕೆ.ಮಹಮ್ಮದ್ ಕಾರ್ಯಕ್ರಮ ನಿರೂಪಿಸಿದರು. ಯುವಜನ ಸಂಯುಕ್ತ ಮಂಡಳಿ ಪ್ರಧಾನ ಕಾರ್ಯದರ್ಶಿ ಸತೀಶ್ ಮೂಕಮಲೆ ವಂದಿಸಿದರು. ಪ್ರವೀಣ್ ಜಯನಗರ, ಸುಧಾರಾಣಿ ಮುರುಳ್ಯ, ರಾಜೀವಿ ಲಾವಂತಡ್ಕ, ಸಂಜಯ್ ನೆಟ್ಟಾರು ಸನ್ಮಾನಿತರನ್ನು ಪರಿಚಯಿಸಿದರು.