ಶ್ರೀಮತಿ ಸುನಂದಾರನ್ನು ದೇವರಕಾನ ಶಾಲೆಗೆ ನಿಯೋಜನೆ
ಮೇ. 16ರಂದು ಬಿ.ಇ.ಒ. ನೇತೃತ್ವದಲ್ಲಿ ಪೋಷಕರ ಸಭೆ
ಮಂಡೆಕೋಲು ಗ್ರಾಮದ ಪೇರಾಲು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುನಂದಾ ರವರು ಎಸ್.ಡಿ.ಎಂ.ಸಿ. ಯವರಿಗೆ ಗೌರವ ನೀಡುತ್ತಿಲ್ಲ ಹಾಗೂ ಶಾಲಾ ಲೆಕ್ಕಾಚಾರ ಸರಿಯಾಗಿ ಇಟ್ಟಿಲ್ಲ ಎಂಬಿತ್ಯಾದಿ ದೂರನ್ನು ಎಸ್.ಡಿ.ಎಂ.ಸಿ.ಯವರು ಹಾಗೂ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದು ಈ ದೂರಿನ ಹಿನ್ನಲೆಯಲ್ಲಿ ಮುಖ್ಯ ಶಿಕ್ಷಕರನ್ನು ಐವರ್ನಾಡು ಗ್ರಾಮದ ದೇವರಕಾನ ಶಾಲೆಗೆ ನಿಯೋಜನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಎಸ್.ಡಿ.ಎಂ.ಸಿ.ಯವರು ನೀಡಿದ ದೂರಿನ ಮೇರೆಗೆ ಎ.29 ರಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗೆ ಬಂದು ವಿಚಾರಣೆ ನಡೆಸಿದ್ದು, ಇದೀಗ ಮುಖ್ಯ ಶಿಕ್ಷಕರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ದೇವರಕಾನ ಶಾಲೆಗೆ ನಿಯೋಜನೆ ಮಾಡಿದ್ದಾರೆ.
“ಪೇರಾಲು ಶಾಲಾ ಮುಖ್ಯ ಶಿಕ್ಷಕಿ ಸುನಂದಾ ರನ್ನು ದೇವರಕಾನ ಶಾಲೆಗೆ ನಿಯೋಜನೆ ಮಾಡಿದ್ದು ಹೌದು. ಆದರೆ ಅವರು ರಿಲೀವ್ ಆಗಿಲ್ಲ. ಮೇ.16 ರಂದು ಶಾಲೆಯಲ್ಲಿ ಪೋಷಕರ ಸಭೆ ಕರೆದು ಈ ಕುರಿತು ಚರ್ಚಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹಾದೇವ ತಿಳಿಸಿದ್ದಾರೆ.