4೦ ನೇ ವರ್ಷಕ್ಕೆ 4೦ ಸಮಾಜಮುಖಿ ಕಾರ್ಯ ಮಾಡಲು ಯೋಜನೆ
ಎಲಿಮಲೆಯ ಇಸ್ಲಾಂ ಅಸೋಸಿಯೇಶನ್ ಸಂಸ್ಥೆಯು ೪೦ ವರ್ಷಗಳನ್ನು ಪೂರೈಸಿದ್ದು ೪೦ರ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು ಒಂದು ವರ್ಷದಲ್ಲಿ ೪೦ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಎಲಿಮಲೆ ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಅಧ್ಯಕ್ಷ ಲತೀಫ್ ಹರ್ಲಡ್ಕ ಹೇಳಿದರು.
ಇಂದು ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ಎಲಿಮಲೆ ಎಂಬಲ್ಲಿ ೧೯೮೨ ರಲ್ಲಿ ಅಬ್ದುಲ್ ರಿಯಾಜ್ ಜುಮ್ಮಾ ಮಸೀದಿ ಅಧೀನದಲ್ಲಿ ಊರಿನ ಶೈಕ್ಷಣಿಕವಾಗಿ ಹಿಂದುಳಿದಿದ್ದ ಸಮುದಾಯವನ್ನು ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಬಲೀಕರಣ ಗೊಳಿಸುವ ಸಲುವಾಗಿ ಅಂದಿನ ಮುಸ್ಲಿಮ್ ಯುವಕರು ಸೇರಿ ನುಸ್ರತ್ತುಲ್ ಇಸ್ಲಾಂ ಎಸೋಸಿಯೇಶನ್ ನನ್ನು ಸ್ಥಾಯಿಸಿದರು. ಕಳೆದ ನಲ್ವತ್ತು ವರ್ಷಗಳಿಂದ ಸಮಾಜದ ಬೆಳವಣಿಗೆಗೆ ಪೂರಕವಾದ ಸೇವೆಗಳನ್ನು ನೀಡುವುದರ ಜತೆಗೆ ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ನಡೆಸುತ್ತಾ ಬಂದಿದೆ. ಸಂಸ್ಥೆಯು ಇದೀಗ ತನ್ನ ನಲವತ್ತ ನೇ ವರ್ಷದ ಸಂಭ್ರಮದಲ್ಲಿ ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವೈಶಿಷ್ಟ್ಯ ಪೂರ್ಣವಾಗಿ ಆಚರಿ ಸುವ ಯೋಜನೆಯನ್ನು ಹೊಂದಿದೆ.
ಗ್ರಾಮೀಣ ಪ್ರದೇಶದಲ್ಲಿ ಸರಕಾರಿ ಶಾಲೆಗಳಲ್ಲಿ ಸೌಲಭ್ಯದ ಕೊರತೆಯಿಂದ ಮಕ್ಕಳು ಕಲಿಯಲು ಹಿಂದೇಟು ಹಾಕುತ್ತಿದ್ದು ಇದರಿಂದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆಯನ್ನು ಮನಗಂಡು ಸರಕಾರಿ ಶಾಲೆಗೆ ಅಗತ್ಯ ವಸ್ತುಗಳನ್ನು ನೀಡುವುದು. ವಾಸಿಸಲು ಅಸಾಧ್ಯವಾದ , ನಾದುರಸ್ತಿಯಲ್ಲಿರುವ ಬಡವರ ಮನೆಗಳನ್ನು ದುರಸ್ತಿಗೊಳಿಸುವುದು ಅಥವಾ ವಾಸ ಯೋಗ್ಯವಾದ ಹೊಸ ಮನೆಗಳನ್ನು ನಿರ್ಮಿಸಿಕೊಡುವುದು. ಸಾರ್ವಜನಿಕರಿಗೆ ಕುಡಿಯಲು ಅತ್ಯಂತ ಶುದ್ಧವಾದ ನೀರನ್ನು ಉಚಿತವಾಗಿ ನೀಡುವ ಉದ್ಧೇಶದಿಂದ ನೀರು ಶುದ್ದೀಕರಣ ಯಂತ್ರವನ್ನು ಸ್ಥಾಪಿಸುವುದು.
ಉಚಿತ ವೈದ್ಯಕೀಯ ಶಿಬಿರ ಅಥವಾ ರಕ್ತದಾನ ಶಿಬಿರವನ್ನು ನಡೆಸುವುದು. ಊರಿನ ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ಸಹಾಯ ನೀಡುವುದು. ರಂಜಾನ್ ತಿಂಗಳಲ್ಲಿ ಊರ ಬಡ ಕುಟುಂಬಗಳನ್ನು ಅಥವಾ ಅನಾಥ ಕುಟುಂಬಗಳನ್ನು ಆಯ್ಕ್ಕೆ ಮಾಡಿ ರಂಜಾನ್ ಕಿಟ್ ವಿತರಿಸುವುದು. ಜಮಾಅತಿನ ವಿವಿಧ ಸಮಾಜ ಸೇವೆ ಸಲ್ಲಿಸಿದ ಧಾರ್ಮಿಕ ಹಾಗೂ ಸಮಾಜ ಸೇವಕರಿಗೆ ಸನ್ಮಾನ ಕಾರ್ಯಕ್ರಮ., ವಿವಿಧ ಮಸೀದಿಗಳು ಹಾಗೂ ಮದ್ರಸಗಳಿಗೆ ವಿವಿಧ ಕೊಡುಗೆಗಳು, ಮದ್ರಸ ಹಾಗೂ ದರ್ಸಿನಲ್ಲಿ ಕಲಿಯುತ್ತಿರುವ ಬಡಮಕ್ಕಳಿಗೆ ಪುಸ್ತಕ/ ವಸ್ತ್ರ ವಿತರಣೆ ಹೀಗೆಯೇ ಹತ್ತು ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು ಈ ನಲುವತ್ತನೇ ವರ್ಷದ ಅಂಗವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿವರ ನೀಡಿದರು.
ಎಲಿಮಲೆ ಜಮಾಅತ್ ಸಮಿತಿ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ ಮಾತನಾಡಿ “ಗ್ರಾಮೀಣ ಭಾಗದಲ್ಲಿ ಇಷ್ಟು ವರ್ಷ ಸಕ್ರಿಯವಾಗಿ ತೊಡಗಿಸಿಕೊಂಡ ಸಂಸ್ಥೆ ಇದು. ಈ ಸಂಸ್ಥೆಯಿಂದ ಹಲವರ ಬದುಕು ಬೆಳಕಾಗಿದೆ” ಎಂದು ಹೇಳಿದರು.
“ಎಲಿಮಲೆ ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಮ್ಯಾರೇಜ್ ಫಂಡ್ ಎಂಬ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಲವು ಬಡ ಕುಟುಂಬದ ಹೆಣ್ಣು ಮಕ್ಕಳ ವಿವಾಹಕ್ಕೆ ಸಹಾಯ ಮಾಡಿದ್ದಾರೆ” ಎಂದು ಸುಳ್ಯ ಗಾಂಧಿನಗರ ಮಸೀದಿ ಅಧ್ಯಕ್ಷ ಕೆ.ಎಂ. ಮುಸ್ತಫ ಹೇಳಿದರು.
ಎಲಿಮಲೆ ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಸೂಫಿ ಎಲಿಮಲೆ, ಜತೆ ಕಾರ್ಯದರ್ಶಿ ಸಿದ್ದಿಕ್ ಎಲಿಮಲೆ ಇದ್ದರು.