2022 ನೇ ಡಿಸೆಂಬರ್ನಲ್ಲಿ ನಡೆಯುವ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವದ ಅಂಗವಾಗಿ ಮೇ. ೧೬ರಂದು ಅವಲೋಕನ ಸಭೆಯು ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆಯವರ ನೇತೃತ್ವದಲ್ಲಿ ನಡೆಯಿತು.
ಶತಮಾನೋತ್ಸವವನ್ನು ಆಚರಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ಹಂತಹಂತವಾಗಿ ವಿವಿಧ ಕಾರ್ಯಕ್ರಮಗಳನ್ನು ಮಾಡುವುದಾಗಿ ತೀರ್ಮಾನಿಸಲಾಯಿತು. ಶತಮಾನೋತ್ಸವದ ನೆನಪಿಗಾಗಿ ನೂರು ಜನರನ್ನು ಸನ್ಮಾನಿಸುವ ಕಾರ್ಯಕ್ರಮ, ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲದ ವ್ಯವಸ್ಥೆ, ಪ್ರಪ್ರಥಮವಾಗಿ ಸುಳ್ಯ ತಾಲೂಕಿನಲ್ಲಿ ಇಎಂಐ (ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿ ಚಾರ್ಜ್) ವ್ಯವಸ್ಥೆ, ಗೂನಡ್ಕದಲ್ಲಿ ಸಹಕಾರಿ ಸಂಘದ ಸ್ವಂತ ಕಟ್ಟಡ ತೆರೆದು ಪಡಿತರ, ಸುಪರ್ಮಾರ್ಕೆಟ್ ತೆರೆಯುವ ಯೋಜನೆ, ರೈತರಿಗೆ ೧ ಲಕ್ಷದವರೆಗೆ ಬಡ್ಡಿ ರಹಿತ ಸೋಲಾರ್ ಅಳವಡಿಕೆಗೆ ಸಾಲ ಸೌಲಭ್ಯ ಮುಂತಾದ ವ್ಯವಸ್ಥೆಗಳನ್ನು ಮಾಡುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯದಲ್ಲಿ ನಿರ್ಮಾಣಗೊಳ್ಳುವ ಪ್ರೆಸ್ಕ್ಲಬ್ ಕಟ್ಟಡಕ್ಕೆ ೨೫೦೦೦ ರೂ.ಗಳ ಚೆಕ್ನ್ನು ಹಸ್ತಾಂತರಿಸಲಾಯಿತು. ಸಭೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಜೈನ್, ಉಪಾಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ಮತ್ತು ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.