ಸಂಪರ್ಕ ವ್ಯವಸ್ಥೆಗೆ ಗ್ರಾಮಸ್ಥರ ಬೇಡಿಕೆ
ಮರ್ಕಂಜ ಎಲಿಮಲೆ ರಸ್ತೆಯ ಸೇವಾಜೆಯಲ್ಲಿ ನಡೆಯುತ್ತಿರುವ ಸೇತುವೆ ನಿರ್ಮಾಣ ಕಾಮಗಾರಿಯ ಕಾರಣ ಬದಲಿ ರಸ್ತೆ ನಿರ್ಮಾಣ ಮಾಡಿದ್ದರು. ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಮಣ್ಣಿನ ಬದಲಿ ರಸ್ತೆಯ ಮೇಳೆ ನೀರು ಬಂದು ರಸ್ತೆ ಕೊಚ್ಚಿ ಹೋಗಿದೆ. ಇದರಿಂದಾಗಿ ಸಂಪರ್ಕ ಕಡಿತಗೊಂಡಿದೆ.
ಕಳೆದ ವರ್ಷ ಮಳೆಗಾಲದ ಮೊದಲು ಸೇತುವೆ ಕಾಮಗಾರಿ ಆರಂಭವಾಗಿ, ಸಂಪರ್ಕಕ್ಕಾಗಿ ನಿರ್ಮಿಸಿದ ಬದಲಿ ಮಣ್ಣಿನ ರಸ್ತೆ ಮಳೆ ನೀರಿಗೆ ಹಲವು ಬಾರಿ ಕೊಚ್ಚಿ ಹೋಗಿದುದಲ್ಲದೇ, ವೃದ್ಧರೊಬ್ಬರು ನೀರಿನಲ್ಲಿ ಕೊಚ್ಚಿ ಹೋಗಿ ಅದೃಷ್ಟವಶಾತ್ ಪ್ರಣಾಪಾಯದಿಂದ ಪಾರಾದ ಘಟನೆಯು ನಡೆದಿತ್ತು. ಮಳೆಗಾಲದಲ್ಲಿ ಈ ಭಾಗದವರು ಪರ್ಯಾಯ ರಸ್ತೆಯನ್ನು ಅವಲಂಭಿಸಬೇಕಾದ ಅನಿವಾರ್ಯ ತೆಯು ಎದುರಾಗಿತ್ತು. ಮಳೆಗಾಲ ಮುಗಿದ ಬಳಿಕ ಸೇತುವೆ ಕಾಮಗಾರಿ ಮತ್ತೆ ಆರಂಭಗೊಂಡು ಕಳೆದ ಮಾಚ್ ೯ ತಿಂಗಳಿನಲ್ಲಿ ಮುಗಿಯುವ ಬಗ್ಗೆ ಇಂಜಿನಿಯರ್ ರವರು ಕೂಡ ಭರವಸೆ ನೀಡಿದ್ದರು.
ಆದರೆ ಈಗ ಮುಕ್ತಾಯದ ಹಂತಕ್ಕೆ ತಲುಪಿದರೂ ವಾಹನ ಓಡುವ ಹಂತಕ್ಕೆ ಕಾಮಗಾರಿ ಮುಟ್ಟಿರುವುದಿಲ್ಲ. ಸೇತುವೆ 2 ಕಡೆ ಮಣ್ಣು ಹಾಕುವ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಇನ್ನು ಜಲ್ಲಿ ಹಾಕಿ ಡಾಮಾರಿಕರಣ ಮಾಡಲು ಬಾಕಿ ಇದೆ. ಈಗ ಮತ್ತೆ ಮಳೆ ಆರಂಭವಾಗಿದೆ. ನದಿಯಲ್ಲಿ ನೀರಿನ ಹರಿವು ಹೆಚ್ಚಾಗತೊಡಗಿದೆ. ಬದಲಿ ರಸ್ತೆ ಕೊಚ್ಚಿ ಹೋಗಿದೆ. ಹೀಗಾಗಿ ನೂತನ ಸೇತುವೆಯಲ್ಲಿ ಲಘುವಾಹನ ಸಂಚರಿಸುವಂತೆ ಆದರೂ ಮಾಡಿಕೊಡಬೇಕೆಂದು ಗ್ರಾಮಸ್ಥರ ಒತ್ತಾಯದ ಬೇಡಿಕೆಯಾಗಿದೆ.