ಸ್ಥಳೀಯರಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ; ಸಚಿವರ ಸ್ಪಂದನೆ
ಸ್ಥಳಕ್ಕೆ ಬಂದ ಇಂಜಿನಿಯರುಗಳ ತಂಡ, ಸ್ಥಳೀಯರಿಂದ ತರಾಟೆ
ಕಾಮಗಾರಿಗೆ ತಾತ್ಕಾಲಿಕ ಸ್ಥಗಿತ ; ರಕ್ಷಣಾ ಕಾರ್ಯಕ್ಕೆ ಆದ್ಯತೆ – ಇಂಜಿನಿಯರ್ ಭರವಸೆ
ಸುಳ್ಯದ ಶಾಂತಿನಗರದಲ್ಲಿ ಬಹುನಿರೀಕ್ಷಿತ ಕ್ರೀಡಾಂಗಣ ಕಾಮಗಾರಿ ಆರಂಭಗೊಂಡಿದ್ದರೂ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಣ್ಣು ಕುಸಿಯುವ ಭೀತಿಯನ್ನು ಈ ಪರಿಸರದ ಮನೆಯವರು ಎದುರಿಸುತ್ತಿದ್ದು, ಈ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಬಂದ ಇಂಜಿನಿಯರ್ಗಳು ಪರಿಶೀಲನೆ ನಡೆಸಿ ರಕ್ಷಣಾ ಕಾರ್ಯಕ್ಕೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ.
ಸುಳ್ಯ ಶಾಂತಿನಗರದ ಕ್ರೀಡಾಂಗಣದ ನಿರ್ಮಾಣದ ಕಾಮಗಾರಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಸ್ಥಳೀಯರಲ್ಲಿ ಆತಂಕ ಹೆಚ್ಚಾಗುತ್ತಿದೆ. ಕಾಮಗಾರಿ ಸಂದರ್ಭ ಕ್ರೀಡಾಂಗಣದ ಒಂದು ಬದಿಗೆ ಮಣ್ಣನ್ನು ಭಾರೀ ಎತ್ತರದಲ್ಲಿ ತುಂಬಿಡಲಾಗಿದ್ದು ಮಳೆಗಾಲದಲ್ಲಿ ಇದು ಕುಸಿದು ಅಪಾಯ ಆಗುವ ಆತಂಕವನ್ನು ಸ್ಥಳೀಯರು ಕಳೆದ ಕೆಲವು ದಿನಗಳಿಂದ ವ್ಯಕ್ತಪಡಿಸುತ್ತಿದ್ದು ಸಚಿವ ಎಸ್. ಅಂಗಾರರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಹಾಗು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಇದರ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಸಚಿವ ಅಂಗಾರರು ಸ್ಥಳ ಪರಿಶೀಲನೆ ನಡೆಸಿ ಮಣ್ಣು ಕೆಳಭಾಗಕ್ಕೆ ಜರಿಯದಂತೆ ಮುನ್ನೆಚ್ಚರಿಕೆಗಾಗಿ ಪ್ಲಾಸ್ಟಿಕ್ ಟಾರ್ಪಾಲು ಹಾಕುವಂತೆ ಸಚಿವರು ಸಲಹೆಯನ್ನು ನೀಡಿದ್ದರು.
ಆದರೆ ಇತ್ತೀಚಿಗೆ ಸುರಿಯುತ್ತಿರುವ ಮಳೆಗೆ ಆತಂಕಗೊಂಡಿರುವ ಸ್ಥಳೀಯರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ಕುಮಾರ್ ಅವರನ್ನು ಪುತ್ತೂರಿನಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಭೇಟಿ ಮಾಡಿ ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮನವಿ ಸಲ್ಲಿಸಿದರು.
ಕೂಡಲೇ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಜಿಲ್ಲಾಧಿಕಾರಿಗಳಿಗೆ ಅಲ್ಲಿ ಅಗತ್ಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ರವರು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ರವರಿಗೆ ಸೂಚನೆ ನೀಡಿದರು. ಈ ಹಿನ್ನಲೆಯಲ್ಲಿ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ಹಾಗು ಸಂಬಂಧಪಟ್ಟ ಇಂಜಿನಿಯರ್ಗಳಾದ ಹರೀಶ್ ಮೆದು, ಚಂದ್ರಶೇಖರ್ ಸ್ಥಳಕ್ಕೆ ನಿನ್ನೆಯೇ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಂಜಿನಿಯರ್ಗಳು ಬರುವ ಮಾಹಿತಿ ತಿಳಿದು ಸ್ಥಳೀಯರು, ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ಮೊದಲಾದವರು ಸ್ಥಳದಲ್ಲಿ ಜಮಾಯಿಸಿದ್ದರು.
ಸ್ಥಳಕ್ಕೆ ಬಂದ ಇಂಜಿನಿಯರುಗಳನ್ನು ಪ್ರಶ್ನಿಸಿದ ಸ್ಥಳೀಯರು ಈ ಭಾಗದಲ್ಲಿ ತುಂಬಿಟ್ಟಿರುವ ಮಣ್ಣು ಈಗ ಸುರಿಯುತ್ತಿರುವ ಮಳೆಯಿಂದಾಗಿ ಸಂಪೂರ್ಣ ಕುಸಿದು ಕೆಳ ಭಾಗದ ಮನೆಗಳು ಮತ್ತು ಕೃಷಿ ಭೂಮಿ ಸಮಾದಿಯಾಗುವ ಆತಂಕ ಇದೆ. ಪ್ರತಿ ಕ್ಷಣವೂ ನಾವು ಆತಂಕದಲ್ಲಿ ಕಳೆಯುತ್ತಿದ್ದೇವೆ. ಮೊದಲ ಮಳೆಗೆ ಮಣ್ಣು ಕುಸಿಯಲು ಆರಂಭಗೊಂಡಿದೆ. ಇದಕ್ಕೆ ಸೂಕ್ತ ರಕ್ಷಣಾ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಕಾಮಗಾರಿಯ ಪ್ಲಾನ್ ಇಲ್ಲದೆ ಬೇಕಾಬಿಟ್ಟಿ ಕೆಲಸ ಮಾಡಿದರೆ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕನಿಷ್ಠಪಕ್ಷ ಕಾಮಗಾರಿ ನಡೆಯುವ ಸಂದರ್ಭ ನೀವು ಬಂದು ಪರಿಶೀಲನೆ ನಡೆಸುತ್ತಿದ್ದರೆ ಈ ರೀತಿಯ ಅನಾಹುತ ಉಂಟಾಗಲು ಸಾಧ್ಯವಾಗುತ್ತಿರಲಿಲ್ಲ. ಕೇವಲ ಜೆಸಿಬಿ ಅವರಿಗೆ ಸೂಚನೆ ನೀಡಿ ಹೋದರೆ ಅವರ ಮನಸ್ಸಿಗೆ ಬಂದಂತೆ ಕೆಲಸ ಮಾಡುತ್ತಾರೆ. ಸ್ಥಳೀಯರಾದ ನಾವು ಯಾವುದೇ ವಿಷಯವನ್ನು ಹೇಳಿದರೆ ಅವರು ಕೇಳುವುದಿಲ್ಲ. ನಾವು ನಿಮಗೆ ಫೋನ್ ಮಾಡಿದರೆ ನೀವು ಫೋನ್ ರಿಸೀವ್ ಮಾಡುವುದಿಲ್ಲ. ಇವರ ಬಳಿ ಏನಾದರೂ ಹೇಳಿದರೆ ನಮ್ಮನ್ನೇ ಗದರಿಸುತ್ತಾರೆ, ಈ ರೀತಿ ಇರುವಾಗ ನಾವು ಯಾರ ಬಳಿ ಹೋಗಿ ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳುವುದು ಎಂದು ಸ್ಥಳೀಯರು ಸ್ಥಳಕ್ಕೆ ಬಂದ ಇಂಜಿನಿಯರ್ ರನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಸುಂದರ ಪಾಟಾಜೆ ರವರು ಸ್ಥಳೀಯರ ಪರವಾಗಿ ಮಾತನಾಡಿ, ಈ ಭಾಗದ ಮಣ್ಣು ಜರಿದು ಸ್ಥಳೀಯ ನಿವಾಸಿಗಳ ಮನೆಗಳ ಮೇಲೆ ಬಿದ್ದು ಜೀವ ಹಾನಿ ಸಂಭವಿಸಿದ್ದಲ್ಲಿ ಇದಕ್ಕೆ ಹೊಣೆ ಯಾರು ಎಂದು ಸ್ಥಳಕ್ಕೆ ಬಂದಿದ್ದ ರಾಜೇಂದ್ರ ಕಲ್ಬಾವಿ ರವರನ್ನು ಪ್ರಶ್ನಿಸಿ,ಆದ್ದರಿಂದ ಸ್ಥಳೀಯರ ರಕ್ಷಣೆಯ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಸ್ಥಳೀಯರಿಗೆ ಧೈರ್ಯ ತುಂಬಿದ ರಾಜೇಂದ್ರರವರು ಈ ವಿಷಯದ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ನಾನು ಸ್ಥಳಪರಿಶೀಲನೆ ಗೆ ಬಂದಿದ್ದು ಇಂಜಿನಿಯರ್ಗಳ ಜೊತೆ ಚರ್ಚೆ ನಡೆಸಿ ಮಣ್ಣು ಕುಸಿಯದಂತೆ ಸದ್ಯ ತಾತ್ಕಾಲಿಕ ರಕ್ಷಣಾ ವ್ಯವಸ್ಥೆ ಮಾಡಿಕೊಡುತ್ತೇವೆ. ಅಲ್ಲಿಯವರೆಗೆ ಯಾವುದೇ ರೀತಿಯ ಸ್ಥಳೀಯರಿಗೆ ತೊಂದರೆಯಾಗುವ ರೀತಿಯ ಕೆಲಸವನ್ನು ಇಲ್ಲಿ ಮಾಡುವುದಿಲ್ಲ. ಮಣ್ಣು ಕುಸಿಯುವ ಭೀತಿ ಇರುವ ಪ್ರದೇಶದಲ್ಲಿ ಮುಂದಕ್ಕೆ ಮಣ್ಣು ಸುರಿಯಲು ಬಿಡುವುದಿಲ್ಲ ಮತ್ತು ಕ್ರೀಡಾಂಗಣದಲ್ಲಿ ಮಳೆಯಿಂದ ತುಂಬುವ ನೀರನ್ನು ಹೊರಹೋಗಲು ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಿಕೊಡುತ್ತೇವೆ ಎಂಬ ಭರವಸೆ ನೀಡಿದರು.
ನಂತರ ಸ್ಥಳೀಯರೊಂದಿಗೆ ಕ್ರೀಡಾಂಗಣದ ಕೆಳಭಾಗದಲ್ಲಿರುವ ಮನೆಗಳ ಪರಿಸರಕ್ಕೆ ಭೇಟಿ ನೀಡಿ ಕ್ರೀಡಾಂಗಣದ ಮೇಲಿನಿಂದ ಹರಿದು ಬರುವ ನೀರನ್ನು ಯಾವ ರೀತಿ ವ್ಯವಸ್ಥಿತವಾಗಿ ಹರಿಯುವಂತೆ ಮಾಡಲು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಬಗ್ಗೆ ಸ್ಥಳೀಯರೊಂದಿಗೆ ಮತ್ತು ಇಂಜಿನಿಯರ್ ಗಳೊಂದಿಗೆ ಚರ್ಚೆ ನಡೆಸಿದರು. ನಂತರ ಗುತ್ತಿಗೆದಾರರಿಗೆ ಸಲಹೆ ನೀಡಿದ ಅವರು ಮೊದಲು ಸ್ಥಳೀಯರಿಗೆ ಸಮಸ್ಯೆಗಳು ಬಾರದ ರೀತಿಯಲ್ಲಿ ನೀರು ಹರಿಯಲು ವ್ಯವಸ್ಥೆಯನ್ನು ಮಾಡಿಕೊಡಿ. ಮಳೆಗಾಲ ಮುಗಿದ ಕೂಡಲೇ ಶಾಶ್ವತ ತಡೆಗೋಡೆ ನಿರ್ಮಿಸಲಾಗುವುದು. ಸದ್ಯಕ್ಕೆ ಇದೀಗ ನಡೆಯುತ್ತಿರುವ ಕಾಮಗಾರಿಯನ್ನು ನಿಲ್ಲಿಸಿ ವಾರದಲ್ಲಿ ತಾತ್ಕಾಲಿಕ ರಕ್ಷಣಾ ವ್ಯವಸ್ಥೆ ಮಾಡುವ ಕೆಲಸವನ್ನು ಮಾಡಿಕೊಡುವಂತೆ ಇಂಜಿನಿಯರುಗಳಿಗೆ ಸೂಚನೆಯನ್ನು ನೀಡಿದರು.
ನಂತರ ಸುದ್ದಿಯೊಂದಿಗೆ ಮಾತನಾಡಿದ ಅವರು, ಕಾಮಗಾರಿಯನ್ನು ಯಾವ ರೀತಿ ಮಾಡಬೇಕು ಎಂಬುವುದನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದ ಬಳಿಕ ಮಾಡಬೇಕಾಗುತ್ತದೆ. ಸರಕಾರದಿಂದ ಬಂದ ಆದೇಶಕ್ಕೆ ಅನುಗುಣವಾಗಿ ನಾವು ಕೆಲಸಕಾರ್ಯಗಳನ್ನು ಮಾಡಬೇಕಾಗುತ್ತದೆ. ಇದೀಗ ಇಲ್ಲಿ ಮಾಡಿರುವ ಕಾಮಗಾರಿಯಲ್ಲಿ ಕೆಲವು ಬದಲಾವಣೆಗಳು ಸಂಭವಿಸಿದೆ. ಇದರಿಂದಾಗಿ ಇಷ್ಟು ಅಧಿಕ ಮಟ್ಟದ ಮಣ್ಣನ್ನು ಕ್ರೀಡಾಂಗಣದ ಮತ್ತೊಂದು ಭಾಗಕ್ಕೆ ಸುಳಿಯುವಂತೆ ಆಗಿದೆ. ಅದನ್ನು ಕ್ರಮಬದ್ಧವಾಗಿ ಮಾಡಿಸಿ ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ನೋಡಿಕೊಳ್ಳುತ್ತೇವೆ ಎಂದು ಹೇಳಿದರು. ಇದೀಗ ಎಲ್ಲಿ ಕೆಲಸ ನಿರ್ವಹಿಸುವ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದ್ದು ಮೊದಲು ಮಣ್ಣು ಜರಿಯದ ರೀತಿಯಲ್ಲಿ ರಕ್ಷಣಾ ಕಾರ್ಯವನ್ನು ಮಾಡಿದನಂತರ ಮುಂದಿನ ಕೆಲಸಕ್ಕೆ ಹೋದರೆ ಸಾಕು. ಅಲ್ಲಿಯವರೆಗೆ ಯಾವುದೇ ರೀತಿಯ ಮಣ್ಣುಗಳನ್ನು ತಂದು ಇಲ್ಲಿ ಸುರಿಯಬಾರದು ಎಂದು ಸೂಚನೆ ನೀಡಿರುತ್ತೇನೆ ಎಂದು ಹೇಳಿದರು.
ಚಂಡಮಾರುತದ ಹಿನ್ನಲೆಯಲ್ಲಿ ಮಳೆ ಬಂದ ಕಾರಣ ಈ ರೀತಿಯ ಸಮಸ್ಯೆ ಉಂಟಾಗಿದೆ. ಮಳೆಗಾಲ ಆರಂಭವಾಗುವ ಮುನ್ನವೇ ಇಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು. ಮಣ್ಣು ಕೆಳಭಾಗಕ್ಕೆ ಜಾರದಂತೆ ಬೇರೆ ಬೇರೆ ರೀತಿಯ ವ್ಯವಸ್ಥೆಗಳು ಇದೆ. ಅವಶ್ಯಕತೆ ಬಂದಲ್ಲಿ ಅವೆಲ್ಲವನ್ನು ೧೫ ದಿನಗಳ ಳೊಳಗೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಬಂದ ವಿಷಯ ತಿಳಿದ ನಿವೃತ್ತ ಶಾರೀರಿಕ ಶಿಕ್ಷಕ ದೊಡ್ಡಣ್ಣ ಬರಮೇಲು ಸ್ಥಳಕ್ಕೆ ಬಂದು ಸಲಹೆ ಸೂಚನೆಗಳನ್ನು ನೀಡಿದರು. ಸ್ಥಳೀಯರಾದ ಡಾ. ಸುಂದರ ಕೇನಾಜೆ, ನವನೀತ ಬೆಟ್ಟಂಪಾಡಿ, ಗೌರಿಶಂಕರ್, ಶಿವರಾಮ್ ನಾಯಕ್, ಪರಿಸರವಾಸಿಗಳ ಮಿತ್ರರುಗಳು ಉಪಸ್ಥಿತರಿದ್ದರು.