ನ.ಪಂ. ನೀರು ಸರಬರಾಜು ಜಾಕ್ವೆಲ್ ನಿರ್ಮಾಣ ಕಾಮಗಾರಿ ಸ್ಥಗಿತ
ಸಾಮಾಗ್ರಿಗಳು ನೀರಿನಲ್ಲಿ ಮುಳುಗಡೆ, ಮಣ್ಣು ಕುಸಿತದಿಂದ ಪಂಪ್ ಹೌಸ್ ಕುಸಿಯುವ ಭೀತಿ
ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ಹಿನ್ನಲೆಯಲ್ಲಿ ಸುಳ್ಯ ನಗರದ ಕಲ್ಲುಮುಟ್ಲುವಿನ ನಗರ ಪಂಚಾಯತ್ನ ನೀರು ಸರಬರಾಜು ಪಂಪ್ ಬಳಿಯಲ್ಲಿ ಭಾರೀ ಪ್ರಮಾಣದಲ್ಲಿ ನಿನ್ನೆ ರಾತ್ರಿ ಭೂ ಕುಸಿತ ಉಂಟಾಗಿದೆ. ಪರಿಣಾಮ ನಗರ ನೀರು ಸರಬರಾಜಿಗೆ ಎರಡು ತಿಂಗಳಿನಿಂದ ನಡೆಯುತ್ತಿದ್ದ ಜಾಕ್ವೆಲ್ ಕಾಮಗಾರಿ ನೀರಲ್ಲಿ ಮುಳುಗಿದೆ. ಅಲ್ಲದೆ ಪಯಸ್ವಿನಿ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ಕೆಸರು ಮಿಶ್ರಿತ ನೀರು ಹರಿದು ಬರುತ್ತಿದೆ. ಈ ನೀರನ್ನು ಶುದ್ದೀಕರಿಸಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಸುಳ್ಯ ನಗರಕ್ಕೆ ನೀರು ಸರಬರಾಜು ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ನಗರಕ್ಕೆ ನೀರು ಸರಬರಾಜಿಗೆ 2.5 ಕೋಟಿ ವೆಚ್ಚದಲ್ಲಿ 5೦ ಲಕ್ಷ ಲೀಟರ್ ಸಂಗ್ರಹವಾಗುವ ಜಾಕ್ವೆಲ್ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಸುಮಾರು ಆರು ಮೀಟರ್ ಆಳದಲ್ಲಿ ಪೌಂಡೇಶನ್ ನಿರ್ಮಿಸಿ ಅದರ ಮೇಲೆ ಒಂದು ಹಂತದ ಕಾಂಕ್ರೀಟ್ ನಡೆಸಲಾಗಿತ್ತು. ಎರಡನೇ ಹಂತದ ಕಾಂಕ್ರೀಟ್ ನಡೆಸಲು ಸಿದ್ಧತೆ ಮಾಡಲಾಗಿತ್ತು. ಆದರೆ ಭಾರೀ ಮಳೆಗೆ ಬದಿಯಲ್ಲಿ ಸುಮಾರು ೫೦ ಮೀಟರ್ ಉದ್ದಕ್ಕೆ ಭಾರೀ ಪ್ರಮಾಣದಲ್ಲಿ ಬರೆ ಕುಸಿದು ಬಿದ್ದಿದೆ. ಅಲ್ಲದೇ ಭಾರೀ ಪ್ರಮಾಣದಲ್ಲಿ ನೀರುಹರಿದು ಬಂದು ಪ್ರದೇಶ ಜಲಾವೃತವಾಗಿದೆ. ಇದರಿಂದ ಕಾಮಗಾರಿ ಸ್ಥಗಿತಗೊಂಡಿದೆ.
ಅದರೊಂದಿಗೆ ಮಂಗಳೂರಿನ ಎಸ್ ಫೋರ್ ಇಂಜಿನಿಯರಿಂಗ್ ಸಂಸ್ಥೆಯ ಕಾಮಗಾರಿಯ ಸಾಮಗ್ರಿಗಳು, ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದ್ದು ಸುಮಾರು ಮೂರು ಲಕ್ಷ ರೂಪಾಯಿಗಳ ನಷ್ಟ ಸಂಭವಿಸಿದೆ ಎಂದು ಕೆಲಸ ನಿರ್ವಹಿಸುವವರು ತಿಳಿಸಿದ್ದಾರೆ.
ಮುಳುಗಡೆಯಾಗಿರುವ ಸಾಮಗ್ರಿಗಳಲ್ಲಿ ಸುಮಾರು 40 ಕ್ಕೂ ಹೆಚ್ಚು ಪ್ಲೈಬೋರ್ಡ್, ಕಬ್ಬಿಣದ ಪೈಪುಗಳು, ಸೆಂಟ್ರಿಂಗ್ ಕೆಲಸದ ಸಾಮಾನುಗಳು, ಇತ್ಯಾದಿ ಸೇರಿಕೊಂಡಿದೆ.
ಕಾಮಗಾರಿ ನಡೆಯುತ್ತಿದ್ದ ಪಕ್ಕದ ಮಣ್ಣಿನ ಗುಡ್ಡೆ ಕುಸಿಯಲು ಆರಂಭಿಸಿದ್ದು ಪಕ್ಕದಲ್ಲೇ ಇರುವ ಪಂಪ್ ಹೌಸ್ ಕುಸಿಯುವ ಭೀತಿಯಲ್ಲಿದೆ.
ಇದೀಗ ಕುಸಿಯುತ್ತಿರುವ ಬರೆಯ ಸಮೀಪ ಪ್ಲಾಸ್ಟಿಕ್ ಟಾರ್ಪಲ್ ಗಳ ಹೊದಿಕೆಗಳನ್ನು ಹಾಕಿದ್ದು ಇದೀಗ ಮಳೆಗೆ ಮುಂದಿನ ದಿನಗಳಲ್ಲಿ ಏನಾಗಬಹುದೆಂಬ ಚಿಂತೆ ಕಾಡತೊಡಗಿದೆ.
ಈಗ ಇರುವ ಪಂಪ್ ಹೌಸ್ ಕಟ್ಟಡ ಮುಂಭಾಗದ ಗ್ರೌಂಡ್ನ ಭಾಗ ಧರಾಶಾಯಿಯಾಗಿದ್ದು ಅಪಾಯದ ಸ್ಥಿತಿ ನಿರ್ಮಾಣವಾಗಿದೆ. ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಸದಸ್ಯ ಬುದ್ಧ ನಾಯ್ಕ್, ನಗರ ನೀರು ಸರಬರಾಜು ಮಂಡಳಿಯ ಕಾರ್ಯಪಾಲಕ ಅಭಿಯೋಜಕ ಚಂದ್ರಶೇಖರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಸನ್ನ, ಸಹಾಯಕ ಇಂಜಿನಿಯರ್ ಗಣೇಶ್ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯಪಾಲಕ ಅಭಿಯಂತರರು ಕಾಮಗಾರಿ ನಡೆಸುತ್ತಿರುವ ಸಂಸ್ಥೆಯ ಇಂಜಿನಿಯರಿಗೆ ಮಾಹಿತಿ ನೀಡಿ ಮೇಲ್ಭಾಗದಿಂದ ಮಣ್ಣು ಕುಸಿತ ಆಗದ ರೀತಿಯಲ್ಲಿ ನೋಡಿಕೊಳ್ಳಲು ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಮಳೆಯಿಂದಾಗಿ ಪಯಸ್ವಿನಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಅಲ್ಲದೆ ಕೆಸರು ಮಿಶ್ರಿತ ಕಲುಷಿತ ನೀರು ಹರಿದು ಬರುತಿದೆ. ಇದರಿಂದ ನೀರು ಶುದ್ದೀಕರಿಸಿ ನೀಡಲು ಸಮಸ್ಯೆ ಎದುರಾಗಿದೆ. ಕಲ್ಲುಮುಟ್ಲುವಿನ ಹಳೆಯದಾದ ಮತ್ತು ಸಾಮರ್ಥ್ಯ ಕಡಿಮೆ ಇರುವ ಶುದ್ದೀಕರಣ ಘಟಕದಲ್ಲಿ ಈ ಕಲುಷಿತ ನೀರು ಶುದ್ದೀಕರಿಸಿ ನೀಡುವುದು ಸಾಧ್ಯವಿಲ್ಲದ ಸ್ಥಿತಿ ಉಂಟಾಗಿದೆ. ಆದುದರಿಂದ ನಗರಕ್ಕೆ ನೀರು ಸರಬರಾಜು ಸ್ಥಗಿತಗೊಳ್ಳುವ ಸಾಧ್ಯತೆ ಇದೆ.