ನಿರಂತರ ಪರಿಶ್ರಮದಿಂದ ಸಾಧನೆ ಸಾಧ್ಯ : ಡಾ. ಚಂದ್ರಶೇಖರ ದಾಮ್ಲೆ
ಸಾಧಕನಿಗೆ ಜ್ಞಾನದ ಹಸಿವಿರಬೇಕು. ಸಾಧನೆಯ ಉತ್ತುಂಗವೇರಲು ನಿರಂತರ ಶ್ರಮ ಅಗತ್ಯ. ಕೇವಲ ಅಂಕ ಗಳಿಕೆ ಮುಖ್ಯವಲ್ಲ. ಅದರೊಂದಿಗೆ ಜ್ಞಾನ, ಕೌಶಲ್ಯ, ಮತ್ತು ಮೌಲ್ಯಗಳನ್ನು ಅಳವಡಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆ ಹೇಳಿದರು.
ಅವರು ಮೇ.24 ರಂದು ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಎಸ್ಎಸ್ಎಲ್ಸಿ ಟಾಪರ್ಗಳನ್ನು ಸನ್ಮಾನಿಸಿ ಮಾತನಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು ಮಾತನಾಡಿ ಸಾಧಕರ ಸಾಧನೆ ಹಿಂದೆ ಹೆತ್ತವರ ಅಭಿಲಾಷೆ, ಗುರುಗಳ ಪ್ರೋತ್ಸಾಹ ಯಾವತ್ತೂ ಇರುತ್ತದೆ. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡದೇ ಪ್ರತಿದಿನ ಅಭ್ಯಾಸ ಮಾಡುವುದರ ಮೂಲಕ ಸಾಧನೆಯತ್ತ ಸಾಗಬೇಕು ಎಂದು ಹೇಳಿದರು.
ಸಂಸ್ಥೆಯ ಶಿಕ್ಷಕರಾದ ಶ್ರೀಮತಿ ಸವಿತಾ ಯಂ, ದೇವಿಪ್ರಸಾದ್ ಜಿ.ಸಿ, ಪ್ರತಿಮಾಕುಮಾರಿ ಕೆ.ಎಸ್., ರೇಷ್ಮಾ ಎಂ.ಆರ್. ಶುಭ ಹಾರೈಸಿದರು. ಸಾಧಕ ವಿದ್ಯಾರ್ಥಿಗಳಾದ ಶೃಜನ್ ಕೆ, ನಿಶಾಂಕ್ ಎಂ. ವಿ, ಉದಿತ್ ಕುಮಾರ್ ಪಿ. ಪಿ, ಆಶಿಕಾ. ಯು, ಜಿತೇಶ್ ಜೆ. ಎಸ್, ಸಂಜನಾ ಜೆ. ಎಸ್, ವೀಕ್ಷಣ್ ಕೆ. ಎಸ್. ತಾವು ಕಲಿತ ಶಾಲೆಯ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರು ಮತ್ತು ಮುಖ್ಯೋಪ್ಯಾಧ್ಯಾಯಿನಿಯವರು ಸಾಧಕ ವಿದ್ಯಾರ್ಥಿಗಳನ್ನು ಶಾಲು ಹೊದಿಸಿ, ಪುಸ್ತಕ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.