ಕಾದು ಕಾದು ಸುಸ್ತಾದ ರೋಗಿಗಳ ಆಕ್ರೋಶ
ಇಂದು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ವಿಕಲಚೇತನರ ಇಲಾಖೆ ವತಿಯಿಂದ ಪ್ರತಿ ತಿಂಗಳು ನಡೆಸಿಕೊಂಡು ಬರುವ ವಿಕಲಚೇತನರ ಗುರುತಿನ ಚೀಟಿ ನೊಂದಾವಣಿ ಮತ್ತು ನವೀಕರಣ ಕ್ಯಾಂಪ್ ನಡೆಯಿತು.
ಈ ಕ್ಯಾಂಪಿಗೆ ಅಂಗವೈಕಲ್ಯತೆಗೆ ಸೇರಿದ ತಪಾಸಣೆ ಮತ್ತು ವೈದ್ಯರ ದೃಢೀಕರಣ ಪತ್ರ ಕಡ್ಡಾಯವಾಗಿದ್ದು, ಇದರ ಹಿನ್ನೆಲೆಯಲ್ಲಿ ಇಂದು ಎಲುಬು ಮತ್ತು ಕೀಲು ತಜ್ಞರ ಕೋಣೆಯ ಮುಂಭಾಗ ತಾಲೂಕಿನ ವಿವಿಧ ಭಾಗಗಳಿಂದ ಬಂದ ರೋಗಿಗಳು ಬೆಳಿಗ್ಗೆ ೯ ಗಂಟೆಯಿಂದಲೇ ಸರತಿ ಸಾಲಿನಲ್ಲಿ ಕಾದು ಕುಳಿತಿದ್ದರು. ಆದರೆ ಮಧ್ಯಾಹ್ನ ಎರಡು ಗಂಟೆಯಾದರೂ ವೈದ್ಯರು ಬಾರದ ಹಿನ್ನೆಲೆಯಲ್ಲಿ ಅಲ್ಲಿ ಕಾದು ಕುಳಿತ ರೋಗಿಗಳು ಆಕ್ರೋಶಗೊಂಡರು.
ನಂತರ ತಾಲೂಕು ವೈದ್ಯಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ ನಂತರ 3 ಗಂಟೆಗೆ ಇದಕ್ಕೆ ಸಂಬಂಧಿಸಿದ ವೈದ್ಯರು ತಮ್ಮ ಕೋಣೆಗೆ ಬಂದರು. ಅಷ್ಟರಲ್ಲಿ ಹಲವು ರೋಗಿಗಳು ವೈದ್ಯರು ಬಾರದ ಹಿನ್ನೆಲೆಯಲ್ಲಿ ಅಲ್ಲಿಂದ ತೆರಳಿದರು. ಹಸಿವಿನಿಂದ ಕಂಗೆಟ್ಟ ಕೆಲವರು ಊಟಕ್ಕೆಂದು ಹೋಗಿದ್ದರು. ಅವರಲ್ಲಿ ಆಕ್ರೋಶಗೊಂಡ ಕೆಲವರು ಸುದ್ದಿಯೊಂದಿಗೆ ಮಾಹಿತಿ ನೀಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ಪ್ರತಿಬಾರಿಯೂ ನಮ್ಮ ಸುಳ್ಯದ ಸರ್ಕಾರಿ ಆಸ್ಪತ್ರೆಯ ಈ ವಿಭಾಗ ಇದೇ ರೀತಿಯಾಗಿರುತ್ತದೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕುಳಿತರು ಇಲ್ಲಿ ವೈದ್ಯರು ಇರುವುದಿಲ್ಲ. ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರೆ ನಮ್ಮಲ್ಲಿ ಆರ್ಥಿಕವಾಗಿ ಏನೂ ಇರುವುದಿಲ್ಲ. ಬಡವರಿಗಾಗಿ ಆಸ್ಪತ್ರೆಗಳನ್ನು ಕಟ್ಟಿ ಸರಿಯಾದ ವೈದ್ಯರನ್ನು ನೇಮಿಸದಿದ್ದಲ್ಲಿ ಬಡವರ ಬಗ್ಗೆ ಕೇಳುವವರು ಯಾರು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.