ಸುಳ್ಯದ ಜಯನಗರ ಶ್ರೀ ಆದಿ ಮೊಗೇರ್ಕಳ ದೈವಸ್ಥಾನದ ಹುಂಡಿಯನ್ನು ದೈವಸ್ಥಾನದ ಅಡುಗೆ ಕೋಣೆಗೆ ಕೊಂಡೊಯ್ದು ಹುಂಡಿಯನ್ನು ಒಡೆಯುತ್ತಿದ್ದ ಸಂದರ್ಭ ಊರವರು ಕಳ್ಳನನ್ನು ರೆಡ್ ಹ್ಯಾಂಡಾಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ಜಯನಗರದಿಂದ ವರದಿಯಾಗಿದೆ.
ಇಂದು ಬೆಳಿಗ್ಗೆ ಸುಮಾರು ಹನ್ನೊಂದು ಗಂಟೆಯ ಸಮಯ ಸ್ಥಳೀಯ ನಿವಾಸಿಗಳು ಪೂಜೆ ಸಲ್ಲಿಸಲು ಎಂದು ದೈವಸ್ಥಾನಕ್ಕೆ ಹೋಗಿದ್ದ ಸಂದರ್ಭ ಅಡುಗೆ ಕೋಣೆಯಿಂದ ಶಬ್ದ ಕೇಳಿ ಬಂದಿದೆ. ಈ ವೇಳೆ ಸ್ಥಳೀಯರು ಕೋಣೆಯ ಒಳಪ್ರವೇಶಿಸಿ ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ದೈವಸ್ಥಾನದ ಹುಂಡಿಯನ್ನು ಒಡೆಯುವ ಪ್ರಯತ್ನದಲ್ಲಿದ್ದ ಎನ್ನಲಾಗಿದೆ.
ಈತನನ್ನು ನೋಡಿದ ಸ್ಥಳೀಯರು ದೈವಸ್ಥಾನಕ್ಕೆ ಸಂಬಂಧಪಟ್ಟವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸ್ಥಳೀಯರು ಸ್ಥಳಕ್ಕೆ ಬಂದು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಸುಳ್ಯ ಠಾಣೆಗೆ ತಂದು ಒಪ್ಪಿಸಿದ್ದಾರೆ.
ಕಳ್ಳತನ ಮಾಡುತ್ತಿದ್ದ ವ್ಯಕ್ತಿ ಜಯನಗರ ಆಶ್ರಯ ಕಾಲೋನಿ ನಿವಾಸಿ ಯಾಗಿದ್ದು ಆತನ ಹೆಸರು ಜೀವನ್ ಎಂದು ತಿಳಿದುಬಂದಿದೆ.
ಘಟನೆಯ ಕುರಿತು ದೈವಸ್ಥಾನ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಸುಂದರ ಕುದ್ಪಾಜೆ ಸುದ್ದಿಗೆ ಮಾಹಿತಿ ನೀಡಿ ಇದಕ್ಕೂ ಮುನ್ನ ಎರಡು ಮೂರು ಬಾರಿ ಈತ ದೈ ವಸ್ಥಾನದ ಒಳಗೆ ಒಂದು ಈ ರೀತಿಯ ಕೃತ್ಯವನ್ನು ಮಾಡಿದ್ದ. ಈ ವೇಳೆ ಆತನನ್ನು ಹಿಡಿದು ಬುದ್ಧಿವಾದ ತಿಳಿಸಿ ಎಚ್ಚರಿಕೆಯನ್ನು ನೀಡಿ ಕಳುಹಿಸಲಾಗಿತ್ತು.
ಆದರೆ ಇಂದು ಬೆಳಿಗ್ಗೆ ಇದೇ ರೀತಿಯ ಕೃತ್ಯವನ್ನು ಆತ ಮಾಡಿದ್ದು ಸ್ಥಳಕ್ಕೆ ನಮ್ಮ ಅಧ್ಯಕ್ಷರು ಕೇಶವ ಮಾಸ್ಟರ್ ಹೊಸಗದ್ದೆ, ಖಜಾಂಜಿ ರಮೇಶ್ ಕುದ್ಪಾಜೆ, ಸಮಿತಿಯ ಮುಖಂಡರುಗಳಾದ ನಿತಿನ್ ಕೊಯಿಂಗೋಡಿ, ದಯಾನಂದ ಹಾಗೂ ಸ್ಥಳೀಯರು ಬಂದು ಆತನನ್ನು ಠಾಣೆಗೆ ಒಪ್ಪಿಸಲು ತೀರ್ಮಾನಿಸಿ ಸುಳ್ಯ ಠಾಣೆಗೆ ಆತನನ್ನು ಒಪ್ಪಿಸಿದೇವೆ ಎಂದು ತಿಳಿಸಿದ್ದಾರೆ.