2021–22 ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭ ವು ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ಮೇ.24ರಂದು ನಡೆಯಿತು. ಕಾರ್ಯಕ್ರಮವನ್ನು ಶಾಲಾ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಚಂದ್ರಶೇಖರ ಭಟ್ ತಳೂರು ಉದ್ಘಾಟಿಸಿ, ವಿದ್ಯಾರ್ಥಿಗಳನ್ನು ಅಭಿನಂದಿಸಿ ದೇಶದ ಸಂಸ್ಕೃತಿಗೆ ರಾಯಭಾರಿಗಳಾಗಬೇಕೆಂದು ಶುಭಹಾರೈಸಿದರು.
ಎಸ್ ಎಸ್ ಎಲ್ ಸಿ ಮೌಲ್ಯಮಾಪನದಲ್ಲಿ 623 ಅಂಕ ಪಡೆದು ರಾಜ್ಯಕ್ಕೆ ತೃತೀಯ ರ್ಯಾಂಕ್ ಗಳಿಸಿದ ಭವಿತ್ .ಜಿ. ಬಾಳುಗೋಡು ಇವರನ್ನು ಹಾರ ಹಾಕಿ , ಶಾಲು ಹೊದಿಸಿ, ಪ್ರೋತ್ಸಾಹಕಧನ, ಫಲಫುಷ್ಪಗಳನ್ನು ನೀಡಿ ಸನ್ಮಾನಿಸಲಾಯಿತು. ಅಲ್ಲದೇ ಶಾಲಾ ಅಡಳಿತ ಮಂಡಳಿಯ ಪರವಾಗಿ ಎರಡು ಚಿನ್ನದ ಉಂಗುರ ಗಳನ್ನು ಕೂಡ ಬಹುಮಾನವಾಗಿ ನೀಡಲಾಯಿತು. ಅದೇ ರೀತಿಯಾಗಿ 617 ಅಂಕಗಳೊಂದಿಗೆ ಶಾಲಾ ಹಂತದಲ್ಲಿ ದ್ವಿತೀಯ ಸ್ಥಾನ ಗಳಿಸಿದ ನಿಧಿ ಎಂ. ಇವರನ್ನು ಕೂಡ ಶಾಲಾ ಪರವಾಗಿ ಹಾರ ಹಾಕಿ ,ಶಾಲು ಹೊದಿಸಿ, ಇವರಿಗೂ ಕೂಡ ಶಾಲಾ ಅಡಳಿತ ಮಂಡಳಿಯ ವತಿಯಿಂದ ಒಂದು ಚಿನ್ನದ ಉಂಗುರವನ್ನು ನೀಡಿ ಸನ್ಮಾನಿಸಲಾಯಿತು.
ಅಲ್ಲದೇ ಕಡ್ಯ – ನಾರ್ಣಕಜೆ ಮೋಹನ ಗೌಡ ಇವರ ಕಡೆಯಿಂದ ಕೊಡಮಾಡುವ ದತ್ತಿನಿಧಿಯನ್ನು ಕೂಡ ಇವರಿಗೆ ನೀಡಲಾಯಿತು.
ಶಿಕ್ಷಕರು ಕೂಡ ಐಚ್ಛಿಕ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಿದರು. ಡಿಸ್ಟಿಂಕ್ಷನ್ ಪಡೆದ 16 ವಿದ್ಯಾರ್ಥಿಗಳನ್ನು ಹಾರ ಹಾಕಿ ಶಾಲು ಹೊದಿಸಿ ಪುಷ್ಪ ವನ್ನು ನೀಡಿ ಅಭಿನಂದಿಸಿ ಮುಂದಿನ ವರ್ಷದ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ಅಂತೆಯೇ ವಿಷಯವಾರು ಶಿಕ್ಷಕರು ಸಹ ತಮ್ಮ ವಿಷಯಗಳಲ್ಲಿ ಶೇಕಡಾನೂರು ಅಂಕಗಳನ್ನು ಪಡೆದವರಿಗೆ ಬಹುಮಾನಗಳನ್ನು ನೀಡಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶುಭಹಾರೈಸಿದರು. ವಿದ್ಯಾರ್ಥಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶಾಲಾ ಶಿಕ್ಷಕರು , ಶಾಲಾ ಮುಖ್ಯೋಪಾಧ್ಯಾಯರಾದ ಗದಾಧರ ಬಾಳುಗೋಡು, ಶಾಲಾ ಆಡಳಿತ ಮಂಡಳಿಯ ಸಂಚಾಲಕರಾದ ಎ. ವಿ. ತೀರ್ಥರಾಮ , ನಿರ್ದೇಶಕರಾದ ರಾಧಾಕೃಷ್ಣ ಮಾವಿನಕಟ್ಟೆ, ಕೃಷ್ಣಯ್ಯ ಮೂಲೆತೋಟ ಇವರು ಮಾತನಾಡಿ ವಿದ್ಯಾರ್ಥಿಗಳಿಗೆ ಕೆಲವೊಂದು ಕಿವಿಮಾತುಗಳನ್ನು ನೀಡಿ ಬೀಳ್ಕೊಟ್ಟರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು , ವಿದ್ಯಾರ್ಥಿ ವೃಂದ
ಆಡಳಿತ ಮಂಡಳಿಯ ಸದಸ್ಯರು ಹಾಗೂ ಪೋಷಕರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ರಾಧಾಕೃಷ್ಣ ಮಾವಿನಕಟ್ಟೆ, ಕೃಷ್ಣಯ್ಯ ಮೂಲೆತೋಟ, ಮಹಾವೀರ ಜೈನ್, ಶ್ರೀಕೃಷ್ಣ ಭಟ್ ಗುಂಡಿಮಜಲು, ಗಂಗಾಧರ ಕೇಪಳಕಜೆ ಉಪಸ್ಥಿತರಿದ್ದರು.