ಸುಳ್ಯದಲ್ಲಿ ಮೇ.4 ರಿಂದ ಮೇ.8 ರವರೆಗೆ ಸುಳ್ಯದಲ್ಲಿ ನಡೆದ ರಾಷ್ಟ್ರೀಯ ವಾಲಿಬಾಲ್ ಅಸೋಸಿಯೇಷನ್ ನ ಯಶಸ್ಸಿಗೆ ಶ್ರಮಿಸಿದವರಿಗೆ ಅಭಿನಂದನಾ ಸಮಾರಂಭ ಹಾಗೂ ಲೆಕ್ಕಪತ್ರ ಮಂಡನೆ ಮೇ.25ರಂದು ಸುಳ್ಯದ ಪರಿವಾರಕಾನ ಉಡುಪಿ ಗಾರ್ಡನ್ ರೆಸ್ಟೋರೆಂಟ್ ಸಭಾಂಗಣದಲ್ಲಿ ನಡೆಯಿತು.
ರಾಷ್ಟ್ರೀಯ ವಾಲಿಬಾಲ್ ಆಯೋಜನಾ ಸಮಿತಿ ಅಧ್ಯಕ್ಷ ಎನ್.ಎ. ರಾಮಚಂದ್ರರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ವಾಲಿಬಾಲ್ ಆಯೋಜನಾ ಸಮಿತಿ ಸಂಘಟನಾ ಕಾರ್ಯದರ್ಶಿ ಎನ್.ಜಯಪ್ರಕಾಶ್ ರೈ ಪ್ರಾಸ್ತಾವಿಕ ಮಾತನಾಡಿಸುಳ್ಯದ ಚರಿತ್ರೆಯಲ್ಲಿ ಇಷ್ಟು ದೊಡ್ಡ ಪಂದ್ಯಾಟ ಇದುವರೆಗೆ ಆಗಿಲ್ಲ. 30 ದಿನದಲ್ಲಿ 30 ಲಕ್ಷ ಸಂಗ್ರಹ ಆಗಬೇಕಿತ್ತು. ಬಳಿಕ ಖರ್ಚು ಹೆಚ್ಚಾಗಿ 36 ಲಕ್ಷ ಖರ್ಚಾಯಿತು. ಆದರೂ ಇಂದು 2 ಲಕ್ಷದ 75 ಸಾವಿರ ಉಳಿಕೆಯಾಗಿ ಅದನ್ನು ತಾಲೂಕು ವಾಲಿಬಾಲ್ ಅಸೋಸಿಯೇಷನ್ ಗೆ ನೀಡಲಿದ್ದೇವೆ. ಇದಕ್ಕೆ ಎಲ್ಲರ ಸಹಕಾರ ಇದೆ ಎಂದು ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ದ.ಕ. ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಕೋಶಾಧಿಕಾರಿ ಇಬ್ರಾಹಿಂ ಗೂನಡ್ಕ, ಅಮೆಚೂರು ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಬಿ.ಕೆ. ಮಾಧವ, ಉಪಾಧ್ಯಕ್ಷ ರುಗಳಾದ ಶಿವರಾಮ ಏನೆಕಲ್, ಹರೀಶ್ ರೈ ಉಬರಡ್ಕ ವೇದಿಕೆಯಲ್ಲಿದ್ದರು.
ಕೋಶಾಧಿಕಾರಿ ಗೋಕುಲ್ ದಾಸ್ ಲೆಕ್ಕಪತ್ರ ಮಂಡಿಸಿದರು. ರಾಷ್ಟ್ರೀಯ ವಾಲಿಬಾಲ್ ಆಯೋಜನಾ ಸಮಿತಿ ಕಾರ್ಯಾಧ್ಯಕ್ಷ ದೊಡ್ಡಣ್ಞ ಬರೆಮೇಲು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ಎಂ. ಮುಸ್ತಫ ಅಭಿನಂದನಾ ಕಾರ್ಯಕ್ರಮ ನಡೆಸಿಕೊಟ್ಟರು.
ಸಮಾರಂಭದಲ್ಲಿ ಎನ್.ಎ. ರಾಮಚಂದ್ರ ಹಾಗೂ ನಿತ್ಯಾನಂದ ಮುಂಡೋಡಿ, ಹಾಗೂ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಸತೀಶ್ ಕೊಯಿಂಗಾಜೆಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.