ಮನೆಗಳು, ದೇವಸ್ಥಾನ, ಶಾಲೆಗಳಿಗೂ ತೊಂದರೆ – ರಸ್ತೆಯೂ ಹಾಳು
ಜಿಲ್ಲಾಧಿಕಾರಿಗಳಿಗೆ ಊರವರ ಮನವಿ
ಮರ್ಕಂಜ ಗ್ರಾಮದ ಅಳವುಪಾರೆ ಎಂಬಲ್ಲಿ ಗಣಿಗಾರಿಕೆಯಿಂದ ಆಗುತ್ತಿರುವ ತೊಂದರೆಯನ್ನು ಹೇಳಿಕೊಂಡ ಮರ್ಕಂಜದ ನಿವಾಸಿ ವೇದಾವತಿ ಎಂಬವರು, ಗಣಿಗಾರಿಕೆ ನಿಲ್ಲಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಅವರ ಜತೆಗೆ ಯುವಕರ ತಂಡವೂ ಮನವಿ ಮಾಡಿಕೊಂಡರು.
ಮನವಿ ನೀಡಿದ ವೇದಾವತಿಯವರು, ಮದ್ದುಗುಂಡುಗಳ ಮೂಲಕ ಕಲ್ಲು ಒಡೆಯಲಾಗುತ್ತದೆ. ದೊಡ್ಡಶಬ್ದವಾಗಿ ಮನೆಗಳು ಬಿರುಕು ಬಿಡುತ್ತಿದೆ. ಮಲಗಿದ್ದರೆ ಮೇಲಕ್ಕೆ ಎತ್ತಿ, ಕೆಳಕ್ಕೆ ಎಸೆದಂತಾಗುವ ಅನುಭವವಾಗುತ್ತದೆ. ಈ ಸಮಸ್ಯೆಯಿಂದ ನಮ್ಮನ್ನು ಪಾರು ಮಾಡಿ, ಗಣಿಗಾರಿಕೆ ನಿಲ್ಲಿಸಿ ಎಂದು ವಿನಂತಿಸಿದರು. ದೇವಸ್ಥಾನ, ಶಾಲೆಗಳಿಗೂ ತೊಂದರೆಯಾಗುತ್ತದೆ. ಕಲ್ಲು ಲೋಡ್ ಹೋಗುವುದರಿಂದ ರಸ್ತೆಯೂ ಹಾಳಾಗುತ್ತಿದೆ ಎಂದು ಯುವಕರು ಕೂಡಾ ಡಿ.ಸಿ. ಗೆ ಸಮಸ್ಯೆ ವಿವರಿಸಿ, ತಹಶೀಲ್ದಾರ್ ಬಂದು ಹೋಗಿದ್ದಾರೆ. ಆದರೆ ಗಣಿಗಾರಿಕೆ ಹಾಗೇ ಮುಂದುವರಿದಿದೆ ಎಂದು ಹೇಳಿದರು.
ಪಿ.ಡಿ.ಒ. ರವಿಚಂದ್ರರನ್ನು ಕರೆದ ಡಿ.ಸಿ.ಯವರು ವಿವರಣೆ ಕೇಳಿದಾಗ, ಪಂಚಾಯತ್ ಎನ್.ಒ.ಸಿ. ನೀಡಿಲ್ಲ ಎಂದು ಉತ್ತರಿಸಿದರು. ಎ.ಸಿ., ಗಣಿಗಾರಿಕಾ ಇಲಾಖಾಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸುವ ಭರವಸೆ ಡಿ.ಸಿ.ಯವರು ಊರವರಿಗೆ ನೀಡಿದರು.