ಬೆಳ್ಳಾರೆಯ ಗೌರಿಹೊಳೆಯ ಪಕ್ಕದ ಗೌರಿಪುರಂ ಶ್ರೀ ರಾಜರಾಜೇಶ್ವರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪೂರ್ವಭಾವಿಯಾಗಿ ಚಿತ್ರಕೂಟ ಸಹಿತ ನಾಗ ದೇವರ ಪ್ರತಿಷ್ಠಾ ಕಾರ್ಯಕ್ರಮ ಮೇ. 26-27ರಂದು ನಡೆಯಿತು.
ಶ್ರೀ ಕ್ಷೇತ್ರದ ಅಭಿವೃದ್ಧಿ ಕಾರ್ಯದಲ್ಲಿ ಆರಂಭಿಕ ಹಂತದಲ್ಲಿ ನಾಗ ದೇವರ ಪ್ರತಿಷ್ಠೆ ನಡೆಯಿತು. ಮೇ. 26ರಂದು ಸಂಜೆ ತಂತ್ರಿಗಳ ಆಗಮನದ ಬಳಿಕ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು. ರಾತ್ರಿ ಚಿನ್ನದ ನಾಗಬಿಂಬ ಜಲಾಧಿವಾಸದ ಬಳಿಕ ಅನ್ನಸಂತರ್ಪಣೆ ನಡೆಯಿತು.
ಮೇ. 27ರಂದು ಮುಂಜಾನೆ 6.00 ಗಂಟೆಯಿಂದ ಮಹಾಗಣಪತಿ ಹೋಮ, ಬ್ರಹ್ಮ ಕಲಶ ಪೂಜೆ ಬಳಿಕ ಬೆಳಿಗ್ಗೆ 9.30ರ ನಂತರ ಕರ್ಕಾಟಕ ಲಗ್ನದಲ್ಲಿ ಚಿತ್ರಕೂಟ ಪ್ರತಿಷ್ಠೆ, ನಾಗಬ್ರಹ್ಮ, ನಾಗರಾಜ, ವೀಣಾಪಾಣಿ ನಾಗಕನ್ನಿಕೆಯರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ನಡೆಯಿತು. ಬಳಿಕ ನಡೆದ ಧಾರ್ಮಿಕ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಜರಾಜೇಶ್ವರಿ ದೇವಸ್ಥಾನ ಗೌರಿಪುರಂ ಸೇವಾ ಟ್ರಸ್ಟ್ನ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಮಹಾಲಕ್ಷ್ಮೀ ಕ್ಷೇತ್ರ ಶ್ರೀ ಧಾಮ ಮಾಣಿಲ ಇಲ್ಲಿಯ ಪರಮಪೂಜ್ಯ ಯೋಗಿ ಕೌಸ್ತುಭ ಕರ್ಮಯೋಗಿ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಧಾರ್ಮಿಕ ಚಿಂತಕರಾದ ಗೋಪಾಲಕೃಷ್ಣ ವಾಂತಿಜಾಲು ಧಾರ್ಮಿಕ ಉಪನ್ಯಾಸ ನೀಡಿದರು. ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಪನ್ನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಟ್ರಸ್ಟ್ನ ಖಜಾಂಜಿ ಆನಂದ ಗೌಡ ಪಡ್ಪು ಸ್ವಾಗತಿಸಿದರು. ಟ್ರಸ್ಟ್ನ ಕಾರ್ಯದರ್ಶಿ ಗೋಪಾಲಕೃಷ್ಣ ಪಿ.ಎಸ್. ಬಂಡಿಮಜಲು ವಂದಿಸಿದರು. ಸುಳ್ಯ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಕೊರಗಪ್ಪ ಕುರುಂಬುಡೇಲು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5.00 ಗಂಟೆಯಿಂದ ಆಶ್ಲೇಷ ಬಲಿ, ಮಹಾಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ.