ಸ್ಥಳೀಯರಿಂದ ಮೃತ ನಾಯಿಯ ದಫನ ಕಾರ್ಯ
ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ಅನ್ನ ಹಾಕಿದ ಮನೆಯನ್ನಾಗಲಿ, ಧಣಿಯನ್ನಾಗಲಿ ಯಾವತ್ತೂ ಮರೆಯದೆ ಬಾಲ ಅಲ್ಲಾಡಿಸಿ ಪ್ರೀತಿ ತೋರುವ ಮೂಕಪ್ರಾಣಿ ಎಂದರೆ ಅದು ನಾಯಿಯೇ.
ಇಲ್ಲೊಂದು ನಾಯಿ ಅದೇ ರೀತಿಯ ಪ್ರೀತಿಗೆ ಪಾತ್ರವಾಗಿತ್ತು.
ಆದರೆ ಏನು ಮಾಡಕ್ಕಾಗುತ್ತೆ ? ಸಾವು ಎಂಬುದು ಯಾವ ಜೀವ ಜಂತುಗಳನ್ನೂ ಬಿಡುವುದಿಲ್ಲ. ಅದು ಯಾವತ್ತಿದ್ದರೂ ಎಲ್ಲರ ಬೆನ್ನ ಹಿಂದೆ ಇದ್ದೇ ಇರುತ್ತದೆ.
ಅಮರಪಡ್ನೂರು ಗ್ರಾಮದ
ಚೊಕ್ಕಾಡಿಯ ವಠಾರವನ್ನು ಕಾಯುತಿದ್ದ ನಾಯಿ ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ರಾಣಿ. ಕಳೆದ 13 ವರ್ಷಗಳಿಂದ ಈ ಪರಿಸರದಲ್ಲಿ ಇದ್ದು ರಾತ್ರಿ ಹಗಲು ಕಾವಲು ಕಾಯುವ ರಾಣಿಯಾಗಿ ಮೆರೆಯುತ್ತಿತ್ತು. ಪರಿಸರದ ಎಲ್ಲಾ ಜನರ ಪರಿಚಯ ಹಾಗೂ ಎಲ್ಲಾ ಜನರ ಪ್ರೀತಿಗೆ ಪಾತ್ರವಾಗಿತ್ತು. ದಿನನಿತ್ಯ ಬರುವ ಪರಿಚಯದ ವ್ಯಕ್ತಿಗಳು ಪ್ರೀತಿಯಿಂದ ರಾಣೀ ಎಂದು ಕರೆದರೆ ಸಾಕು.
ತಕ್ಷಣ ಬಾಲ ಅಲ್ಲಾಡಿಸಿಕೊಂಡು ಹತ್ತಿರ ಬರುತ್ತಿತ್ತು. ಅಪರಿಚಿತ ವ್ಯಕ್ತಿಗಳು ಯಾರೇ ಬಂದರೂ ಬೊಗಳುವ ಮೂಲಕ ಅದು ತನ್ನ ಕರ್ತವ್ಯ ನಿಷ್ಠೆಯನ್ನು ತೋರುತ್ತಿತ್ತು. ವಠಾರದಲ್ಲಿರುವ ವ್ಯಾಪಾರಸ್ಥರು ಮತ್ತು ಬಂದು ಹೋಗುವ ಜನರು ಏನಾದರೂ ಆಹಾರವನ್ನು ದಿನನಿತ್ಯ ನೀಡುತಿದ್ದರು. ಆದರೆ ಮೇ.28 ರಂದು ರಾಣಿ ಇದ್ದಕ್ಕಿದ್ದಂತೆ ಸಾವಿಗೆ ಶರಣಾಯಿತು. ರಾಣಿಯ ಸಾವಿನ ಸುದ್ದಿ ತಿಳಿದು ಪರಿಸರದ ಸ್ಥಳೀಯರು ಬಹಳಷ್ಟು ನೊಂದುಕೊಂಡರು. ಅಷ್ಟು ಮಾತ್ರವಲ್ಲದೆ ಒಬ್ಬ ಮನುಷ್ಯನ ಸಾವು ಸಂಭವಿಸಿದಾಗ ಯಾವ ರೀತಿಯ ಗೌರವ ನೀಡಲಾಗುವುದೋ ಅದರಂತೆ ಮೃತ ನಾಯಿಯ ಶವಕ್ಕೆ ಗಂಧದ ಹಾರ ಹಾಕಿ ಗುಂಡಿ ತೋಡಿ ದಫನ ಕಾರ್ಯ ನೆರವೇರಿಸಲಾಯಿತು. ಮೂಕ ಪ್ರಾಣಿಯಾದರೂ ಅಪಾರ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದ್ದ ರಾಣಿಯ ಅಗಲಿಕೆ ಚೊಕ್ಕಾಡಿ ಪರಿಸರದವರಿಗೆ ದು:ಖ ತರಿಸಿರುವುದಂತೂ ಸತ್ಯ.