ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕ ಬಳಕೆಯನ್ನು ಮಿತಗೊಳಿಸುವ ಕಾಯಿದೆ 1986 ಅಡಿಯಲ್ಲಿ ನಿಗದಿಪಡಿಸಿದ ಡೆಸಿಬಲ್ ಗಿಂತ ಹೆಚ್ಚಿನ ಶಬ್ದ ವನ್ನು ಉಪಯೋಗಿಸಬಾರದು ಎಂದು ನ್ಯಾಯಾಲಯ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಮೇ. 26 ರಂದು ಸುಳ್ಯ ಪೋಲೀಸ್ ಠಾಣಾ ವ್ಯಾಪ್ತಿಗೊಳಪಟ್ಟ ಮಸೀದಿ, ಚರ್ಚ್, ದೇವಸ್ಥಾನ, ಧಾರ್ಮಿಕ ಕೇಂದ್ರಗಳ ಪದಾಧಿಕಾರಿಗಳ ಸಭೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಠಾಣಾ ಉಪನಿರೀಕ್ಷಕ ದಿಲೀಪ್ ರವರ ನೇತೃತ್ವದಲ್ಲಿ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ ಐ ಯವರು ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕದ ಶಬ್ದಗಳನ್ನು ಕಡಿಮೆಗೊಳಿಸಲು ಹಾಗೂ ನಿಗದಿಪಡಿಸಿರುವ ಸಮಯವನ್ನು ಪಾಲಿಸುವ ಬಗ್ಗೆ ಸುಪ್ರೀಂ ಕೋರ್ಟು ಕೊಟ್ಟಿರುವ ತೀರ್ಪಿನ ಮಾಹಿತಿಯನ್ನು ನೀಡಿದರು.
ಈ ನಿಯಮಗಳು ಕೇವಲ ಧಾರ್ಮಿಕ ಕೇಂದ್ರಗಳಿಗೆ ಮಾತ್ರವಲ್ಲದೆ ಧ್ವನಿವರ್ಧಕ ಬಳಸುವ ಎಲ್ಲಾ ಕಾರ್ಯಕ್ರಮಗಳಿಗೂ ಅನ್ವಯ ವಾಗಿರುತ್ತದೆ ಎಂದು ಾಸವರು ಹೇಳಿದರು. ಕ್ರೀಡಾ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಮದುವೆ ಮುಂತಾದ ಸಮಾರಂಭಗಳು, ಜಾತ್ರೆಗಳು ಇವೆಲ್ಲವೂ ಒಳಗೊಂಡಿರುತ್ತದೆ. ಯಾವುದೇ ಕಾರ್ಯಕ್ರಮಗಳಿಗೆ ಧ್ವನಿವರ್ಧಕವನ್ನು ಬಳಸುವಾಗ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆದಿರಬೇಕಾಗುತ್ತದೆ. ಅನುಮತಿ ಪಡೆಯದೆ ಧ್ವನಿವರ್ಧಕವನ್ನು ಬಳಸಿದಲ್ಲಿ ಅಂಥವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಧಾರ್ಮಿಕ ಮುಖಂಡರುಗಳು ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ ಕಾನೂನು ಪಾಲನೆ ಮಾಡುವುದಾಗಿ ಹೇಳಿದರು.