ಕರಾವಳಿಯಲ್ಲಿ ಕೃಷಿ ವಿವಿ ಸ್ಥಾಪನೆಗೆ ಒತ್ತಾಯ
” ಕರ್ನಾಟಕದ ಕರಾವಳಿ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕರಾವಳಿ ಭಾಗದಲ್ಲೊಂದು ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಬೇಕು. ಈ ವೇದಿಕೆಯಿಂದಲೇ ಆ ಅಭಿಯಾನ ಪ್ರಾರಂಭಗೊಳ್ಳಲಿ ” ಎಂದು ದೆಹಲಿ ಕನ್ನಡ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಹೇಳಿದ್ದಾರೆ.
ದೆಹಲಿಯ ಕನ್ನಡ ಶಾಲೆಯಲ್ಲಿ ನಮ್ಮೂರು ನಮ್ಮ ಹೆಮ್ಮೆ ಎಂಬ ಅಭಿಯಾನದ ಅಡಿಯಲ್ಲಿ ದೆಹಲಿ ಮಿತ್ರ ಮತ್ತು ಸುದ್ದಿ ಮಾಹಿತಿ ಟ್ರಸ್ಟ್ ಜಂಟಿ ಸಹಯೋಗದಲ್ಲಿ ಏರ್ಪಡಿಸಲಾದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಅಭಿವೃದ್ಧಿ ಸ್ಪಂದನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
” ಉಡುಪಿ ಮತ್ತು ದಕ್ಷಿಣ ಕನ್ನಡ ಮೂಲದ 6 ಸಂಸದರು ಸಂಸತ್ತಿನಲ್ಲಿದ್ದಾರೆ. ಅದೇ ರೀತಿ, ವಿವಿಧ ಇಲಾಖೆಗಳ ಆಯಕಟ್ಟಿನ ಹುದ್ದೆಗಳಲ್ಲಿ ಈ ಜಿಲ್ಲೆಗಳಿಂದ ಬಂದ ಅಧಿಕಾರಿಗಳಿದ್ದಾರೆ. ನಮ್ಮ ಜಿಲ್ಲೆ, ತಾಲೂಕು ಹಾಗೂ ಗ್ರಾಮಗಳ ಅಭಿವೃದ್ದಿಗೆ ಇವರೆಲ್ಲರನ್ನು ನಾವು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ಸರ್ಕಾರದ ಎಷ್ಟೋ ಯೋಜನೆ, ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮಾಹಿತಿಯೇ ಇರುವುದಿಲ್ಲ ಮತ್ತು ಸರ್ಕಾರದಿಂದ ನೆರವನ್ನು ಪಡೆಯುವ ವಿಧಾನವೂ ಅವರಿಗೆ ಗೊತ್ತಿರುವುದಿಲ್ಲ. ಈ ನಿಟ್ಟಿನಲ್ಲಿ ದೆಹಲಿಯಲ್ಲಿರುವ ತುಳುವರು ಮತ್ತು ಸುದ್ದಿ ಮಾಹಿತಿ ಟ್ರಸ್ಟ್ ಜಂಟಿಯಾಗಿ ನಮ್ಮ ಊರುಗಳ ಅಭಿವೃದ್ಧಿಗೆ ಹೇಗೆ ಸ್ಪಂದಿಸಬಹುದು ಎಂಬ ಬಗ್ಗೆ ಚರ್ಚಿಸುವ ಉದ್ದೇಶದಿಂದಲೇ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ” ಎಂದು ಅವರು ಹೇಳಿದರು. ಸಮಾಜದಲ್ಲಿ ಗಣ್ಯರೆನಿಸಿಕೊಂಡ ವ್ಯಕ್ತಿಗಳು ತಮ್ಮ ಹಳ್ಳಿ, ಗ್ರಾಮಗಳ ಶ್ರೇಯೋಭಿವೃದ್ಧಿಗೆ ಸ್ಪಂದಿಸುವ ಅಗತ್ಯದ ಬಗ್ಗೆಯೂ ಅವರು ಗಮನಸೆಳೆದರು.
ಸುದ್ದಿ ಮಾಹಿತಿ ಟ್ರಸ್ಟ್ ಅಡಳಿತಾಧ್ಯಕ್ಷ ಡಾ। ಯು.ಪಿ. ಶಿವಾನಂದ ಅವರ ವ್ಯಕ್ತಿತ್ವ ಚಿತ್ರಣ ನೀಡಿದ ಜನಪದ ವಿದ್ವಾಂಸ, ಜೆಎನ್ ಯು ಕನ್ನಡ ಪೀಠದ ಮಾಜಿ ಮುಖ್ಯಸ್ಥ, ಸಾಹಿತಿ ಡಾ. ಪುರುಷೋತ್ತಮ ಬಿಳಿಮಲೆಯವರು, ಗ್ರಾಮೀಣ ಭಾಗದಲ್ಲಿ ಸುದ್ದಿ ಬಿಡುಗಡೆಯು ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ತೆರೆದುಕೊಂಡ ಬಗೆಯನ್ನು ಮುಂದಿಟ್ಟರು. ” 1982ರಲ್ಲಿ ಸುಳ್ಯದಲ್ಲಿ ಬಳಕೆದಾರರ ಹೋರಾಟ ಆರಂಭಿಸಿ ಈಗ ಸುದ್ದಿ ಬಿಡುಗಡೆ, ಸುದ್ದಿ ಚಾನೆಲ್ ಮತ್ತು ಸುದ್ದಿ ವೆಬ್ ಸೈಟ್ ಗಳ ಮೂಲಕ ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕಿನ ಮನೆ-ಮನಗಳನ್ನು ತಲುಪಿದ್ದಾರೆ. ಬಹುಶಃ ಈ ಮೂರು ಭಾಗದಲ್ಲಿ ಸುದ್ದಿ ಪತ್ರಿಕೆ ಬಗ್ಗೆ ತಿಳಿಯದ ಯಾರೊಬ್ಬನೂ ಇರಲಿಕ್ಕಿಲ್ಲ” ಎಂದು ಅಭಿಪ್ರಾಯಪಟ್ಟ ಡಾ। ಬಿಳಿಮಲೆಯವರು
” ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಅವರ ಬಗ್ಗೆ ವಿಶೇಷ ಲೇಖನಗಳನ್ನು ಪ್ರಕಟಿಸಿ, ಅವರನ್ನು ಬೆಳಕಿಗೆ ತರುವ ಶಿವಾನಂದರ ಪ್ರಯತ್ನ ಅಭಿನಂದನೀಯ. ಇದು ಸಾಮಾನ್ಯವಾದ ಕೆಲಸ ಅಲ್ಲವೇ ಅಲ್ಲ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ। ಯು.ಪಿ. ಶಿವಾನಂದರು ಮಾತನಾಡಿ, ” ಹಳ್ಳಿಯಿಂದ ದಿಲ್ಲಿಗೆ ಎಂಬ ವಿಚಾರ ನಂಬಿದವನು ನಾನು. ನಮ್ಮ ಊರು ಅಭಿವೃದ್ಧಿ ಆಗುವುದರ ಜತೆಗೆ ಲಂಚ ಭ್ರಷ್ಟಾಚಾರ ಮುಕ್ತಗೊಳ್ಳಬೇಕು. ಇದಕ್ಕಾಗಿ ದೆಹಲಿಯ ಎಲ್ಲರೂ ಕೈಜೋಡಿಸಬೇಕು. ನಮ್ಮ 3 ತಾಲೂಕಿನಲ್ಲಿ ಲಂಚ, ಭ್ರಷ್ಟಾಚಾರ ಕಡಿಮೆಯಾಗುತ್ತಿದೆ ಎಂದು ನಾವು ಹೆಮ್ಮೆಯಿಂದ ಹೇಳಬಲ್ಲೆವು. ಬಲಾತ್ಕಾರದ ಬಂದ್ ಆಂದೋಲನಕ್ಕೆ ಸಿಕ್ಕ ಅಭೂತಪೂರ್ವ ಬೆಂಬಲ ನಮ್ಮ ಲಂಚ, ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೂ ದೊರೆತಿದೆ. ನಮ್ಮೂರಿನ ಅಗತ್ಯತೆಗಳಿಗೆ ಸ್ಪಂದನೆ ಹಾಗೂ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ನಿಮ್ಮೆಲ್ಲರ ಕೈಜೋಡಿಸುವಿಕೆ ಅತ್ಯಗತ್ಯ” ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಹಣಕಾಸು ಇಲಾಖೆಯ ಐಇಎಸ್ (ಇಂಡಿಯನ್ ಎಕನಾಮಿಕ್ ಸರ್ವೀಸ್) ಅಧಿಕಾರಿಗಳಾದ ಡಾ. ಪ್ರಸನ್ನ ವಿ ಸಾಲ್ಯಾನ್, ಶ್ವೇತಾ ರಾವ್ ಬಿ., ಹರೀಶ್ ಕುಮಾರ್ ಕಲ್ಲೇಗ, ಕರ್ನಾಟಕ ಸರ್ಕಾರದ ಉದ್ಯೋಗ ಮಿತ್ರ, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ನಿವಾಸಿ ನಿರ್ದೇಶಕಿ ಎಸ್.ಜಿ. ಸರಸ್ವತಿಯವರು ಮಾತನಾಡಿ, ತಮ್ಮ ಇತಿಮಿತಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮ, ಕೆಲಸಗಳಿಗೆ ಪೂರಕ ಸಹಕಾರ, ನೆರವು ನೀಡುವುದಾಗಿ ಭರವಸೆ ನೀಡಿದರು.
ಈ ವೇಳೆ ಡಾ। ಯು.ಪಿ.ಶಿವಾನಂದ ಅವರಿಗೆ ದೆಹಲಿ ಮಿತ್ರ ಸಂಸ್ಥೆ ಪರವಾಗಿ ಸನ್ಮಾನಿಸಲಾಯಿತು.
ದೆಹಲಿ ಕನ್ನಡ ಶಾಲೆಯ ಡಾ। ಶಶಿ ಕುಮಾರ್ ಉಪಸ್ಥಿತರಿದ್ದರು.
ದೆಹಲಿ ಕರ್ನಾಟಕ ಸಂಘದ ಉಪಾಧ್ಯಕ್ಷೆ ಪೂಜಾ ರಾವ್ ನಿರೂಪಣೆ ಮಾಡಿದರೆ, ಕೇಂದ್ರ ಸಂಸ್ಕೃತಿ ಇಲಾಖೆಯ ಗ್ರಂಥಾಲಯ ಮತ್ತು ವಾರ್ತಾಧಿಕಾರಿ ಡಾ. ಅವನೀಂದ್ರನಾಥ ರಾವ್ ಸ್ವಾಗತಿಸಿದರು. ದೆಹಲಿ ಪತ್ರಕರ್ತ ರಾಘವ ಶರ್ಮ ನಿಡ್ಲೆ ವಂದಿಸಿದರು.