ಸುಳ್ಯ : ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಬಾಹ್ಯ ವಿಷಯಗಳಿಗೆ ಗಮನ ಕೊಡದೆ ಪಠ್ಯ ಚಟುವಟಿಕೆಗೆ ಹೆಚ್ಚು ಗಮನ ಕೊಡಬೇಕೆಂದು ಶಿಕ್ಷಣ ಸಂಯೋಜಕ ಡಾ.ಸುಂದರ ಕೇನಾಜೆ ಹೇಳಿದರು.
ಅವರು ಅಜ್ಜಾವರ ಚೈತನ್ಯ ಶ್ರೀ ಸೇವಾಶ್ರಮದಲ್ಲಿ 150 ವಿದ್ಯಾರ್ಥಿಗಳಿಗೆ ಆಶ್ರಮದ ವತಿಯಿಂದ ಉಚಿತ ಬರೆಯುವ ಪುಸ್ತಕ,ಪೆನ್ನು,ರಬ್ಬರ್ ವಿತರಿಸಿ ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಜ್ಜಾವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗೋಪಿನಾಥ್ ಆಧುನಿಕ ಕಾಲದಲ್ಲಿ ಪುರಾಣ ಕಥೆಗಳನ್ನು ಹಾಗೂ ಇತರ ವಿಷಯಗಳನ್ನು ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಇದು ವಿದ್ಯಾರ್ಥಿ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಪುರಾಣ ಕಥೆಗಳಲ್ಲಿ ನೈತಿಕತೆಯ ಪಾಠಗಳು ಇರುತ್ತಿದ್ದವು.ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಕಾರಿಯಾಗುತ್ರಿದ್ದವು.ಓದು ಕಡಿಮೆಯಾಗಿರುವುದು ವಿದ್ಯಾರ್ಥಿಗಳಲ್ಲಿ ನೈತಿಕತೆ ಕುಸಿಯಲು ಒಂದು ಕಾರಣವಾಗಿದೆ ಎಂದು ಹೇಳಿದರು.
ಆಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರನಾಂದ ಸರಸ್ವತಿ ಸ್ವಾಮೀಜಿಯವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಾನು ಜನರ ಸೇವೆ ಜನಾರ್ದನ ಸೇವೆ ಎಂದು ತಿಳಿದುಕೊಂಡು ನನ್ನ ಕೈಲಾದ ಕಿಂಚಿತ್ತು ಸಹಾಯವನ್ನು ಸಮಾಜಕ್ಕೆ ಅರ್ಪಣೆ ಮಾಡುತ್ತಿದ್ದೇನೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಆಶ್ರಮದ ಟ್ರಸ್ಟಿಗಳಾದ ಪ್ರಣವಿ ಶಂಕರ ಪೆರಾಜೆ, ಅಜ್ಜಾವರ ಮಹಿಳಾ ಮಂಡಲದ ಅಧ್ಯಕ್ಷೆ ಶಸ್ಮಿ ಭಟ್, ನಿವ್ರತ್ತ ಸಹಾಯಕ ಪೊಲೀಸ್ ಉಪನಿರೀಕ್ಷಕ ಕುಶಾಲಪ್ಪ ಗೌಡ ಉಪಸ್ಥಿತರಿದ್ದರು.