ಮಳೆಗಾಲ ಬಂತೆಂದರೆ ಸಾಕು ಜನರು ಎಲ್ಲಿಲ್ಲದ ಕಾಯಿಲೆಗಳಿಗೆ ತುತ್ತಾಗುತ್ತಿರುತ್ತಾರೆ. ಅದರಲ್ಲೂ ಮಳೆ ಅತಿಯಾಗಿ ಸುರಿಯುವ ಕರಾವಳಿ ಭಾಗದಲ್ಲಿ ಡೆಂಗೀ, ಚಿಕೂನ್ ಗುಣ್ಯ, ಇಲಿಜ್ವರ, ಮಲೇರಿಯಾದಂತಹ ಜ್ವರಗಳು ಸಾಮಾನ್ಯವಾಗಿದೆ. ಡೆಂಗೀಜ್ವರವೂ ಹಗಲಿನಲ್ಲಿ ಕಚ್ಚುವ ಇಡಿಸ್ ಈಜಿಪ್ಟೈ ಎಂಬ ಸೊಳ್ಳೆ ಕಡಿತದಿಂದ ಒಬ್ಬರಿಂದಗೊಬ್ಬರಿಗೆ ಹರಡುತ್ತದೆ. ಈ ಕಾಯಿಲೆಯನ್ನು ನಿರ್ಲಕ್ಷಿಸಿದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ. ಹಾಗಾಗಿ ಇಂತ ಮಾರಕ ರೋಗ ಬಾರದಿರುವ ಹಾಗೆ ತಡೆಯುವ ಅವಶ್ಯಕತೆ ಇದೆ. ಡೆಂಗೀ ರೋಗಿಗೆ ಸೂಕ್ತ ಆರೈಕೆ ನೀಡುವುದೂ ಅಷ್ಟೇ ಅಗತ್ಯ.
*ಡೆಂಗೀರೋಗದ ಲಕ್ಷಣಗಳು:*
ಡೆಂಗೀಜ್ವರ ಪ್ಲಾವಿವಿರಿಡೆ ವಂಶಕ್ಕೆ ಸೇರಿದ ವೈರಸ್ ನಿಂದ ಬರುತ್ತದೆ. DENV-1, DENV-2, DENV-3, DENV-4 ಇವುಗಳು ಡೆಂಗೀಜ್ವರಕ್ಕೆ ಕಾರಣವಾಗುವ ನಾಲ್ಕು ಸೆರೋಟೈಪ್ ಗಳು. ಹಗಲಿನಲ್ಲಿ ಕಾಣುವ ಸೋಂಕಿತ ಹೆಣ್ಣು ಸೊಳ್ಳೆ ಇಡೀಸ್ ಈಜಿಪ್ಟೈ ಕಡಿತದಿಂದ ಹರಡುತ್ತದೆ.
ಸೋಂಕಿತ ಸೊಳ್ಳೆ ಕಚ್ಚಿದ 2 ರಿಂದ 7 ದಿನಗಳ ಒಳಗೆ ವ್ಯಕ್ತಿಯಲ್ಲಿ ರೋಗಲಕ್ಷಣಗಳು ಕಾಣಿಸುತ್ತದೆ. ವಿಪರೀತ ಜ್ವರ(104°Fರಷ್ಟು) ಈ ರೋಗದ ಮುಖ್ಯ ಲಕ್ಷಣ. ಮೈಕೈ ನೋವು, ಕೀಲುಗಳಲ್ಲಿ ನೋವು, ತಲೆನೋವು, ಕಣ್ಣಿನಗುಡ್ಡೆಗಳಲ್ಲಿ ನೋವು, ದೇಹದ ಮೇಲೆ ದದ್ದೆಗಳೇಲುವುದು ಡೆಂಗೀಜ್ವರದ ಪ್ರಮುಖ ರೋಗಲಕ್ಷಣಗಳು. ಕೆಲವರಲ್ಲಿ ಹೊಟ್ಟೆನೋವು, ವಾಂತಿ ಕೂಡ ಕಾಣಬಹುದು. ಈ ರೀತಿ ಇದ್ದಾಗ ವೈದ್ಯರನ್ನು ಬೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಮಲ ಮೂತ್ರದ ಬಣ್ಣಗಳಲ್ಲಿ ವ್ಯತ್ಯಾಸ, ಮೂಗು ವಸಡುಗಳಲ್ಲಿ ರಕ್ತಸೋರುವಿಕೆ, ರಕ್ತ ವಾಂತಿಯಾಗುವುದು ‘ಸಿವಿಯರ್ ಡೆಂಗ್ಯೂ’ವಿನ ಲಕ್ಷಣ. ಇದಕ್ಕೆ ತುರ್ತು ಚಿಕಿತ್ಸೆಯ ಅಗತ್ಯವಿರುತ್ತದೆ. ರಕ್ತದಲ್ಲಿ ಪ್ಲೇಟ್ ಲೆಟ್ ಅಂಶ ಕಡಿಮೆ ಯಾಗುತ್ತ ಹೋದಂತೆ ವ್ಯಕ್ತಿಯಲ್ಲಿ ಆಯಾಸ, ಸುಸ್ತು ಹೆಚ್ಚುತ್ತಾ ಹೋಗುತ್ತದೆ. ಕೊನೆಯಲ್ಲಿ ಇದು ರಕ್ತಸ್ರಾವಕ್ಕೆ ಕಾರಣವಾಗುತ್ತದೆ.
*ಡೆಂಗೀರೋಗಿಯು ಅನುಸರಿಸಬೇಕಾದ ಕ್ರಮಗಳು*
-ಮಳೆಗಾಲದಲ್ಲಿ ಕಾಣುವ ಯಾವುದೇ ಜ್ವರವನ್ನು ನಿರ್ಲಕ್ಷಿಸದೇ ವೈದ್ಯರ ಸಲಹೆ ಪಡೆಯಿರಿ. ದೇಹದಾಯಸ, ಸುಸ್ತು ಹೆಚ್ಚಿರುವವರು ಮನೆಯಲ್ಲೇ ಇದ್ದು ವಿಶ್ರಾಂತಿ ತೆಗೆದುಕೊಳ್ಳಬೇಕು. ಜೊತೆಗೆ ಆಗಾಗ ನೀರು ಕುಡಿಯುತ್ತಿರಬೇಕು. ನೀರಿನ ಹೊರತಾಗಿಯೂ ಗಂಜಿ, ಅಂಬಲಿ, ಸೂಪ್, ಜ್ಯೂಸ್ ಹಣ್ಣು-ಹಂಪಲು, ಬೇಯಿಸಿದ ತರಕಾರಿಗಳ ಸೇವನೆ ಅಗತ್ಯ. ಇದು ಸುಲಭದಲ್ಲಿ ಜೀರ್ಣವಾಗಲು ಸಹಾಯವಾಗುತ್ತದೆ. ನೀರು, ಎಳೆನೀರು ಕುಡಿಯುವುದರಿಂದ ದೇಹ ನಿರ್ಜಲೀಕರಣವಾಗುವುದನ್ನು ತಪ್ಪಿಸಬಹುದು. ಜೊತೆಗೆ ದೇಹದಲ್ಲಿ ಲವಣಾಂಶಗಳ ಸಮತೋಲನವನ್ನು ಮಾಡುತ್ತದೆ.
-ಡೆಂಗೀಜ್ವರದಲ್ಲಿ ಪ್ಲೇಟ್ ಲೆಟ್ ಸಂಖ್ಯೆ ಕಡಿಮೆಯಾಗುವುದರಿಂದ ಇದರ ಹೆಚ್ಚಳಕ್ಕಾಗಿ, ಕಿವಿ ಹಣ್ಣು, ಪಪ್ಪಾಯ, ದಾಳಿಂಬೆ ಇತ್ಯಾದಿ ಹಣ್ಣುಗಳನ್ನು ಸೇವಿಸಬೇಕು. ನೆಲ್ಲಿಕಾಯಿ, ಮೂಸಂಬಿ, ಕಿತ್ತಳೆಯಂತಹ ಹಣ್ಣುಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಅರಶಿಣ, ಶುಂಠಿ, ಏಲಕ್ಕಿ, ತುಳಸಿ ಹಾಕಿ ಮಾಡಿದ ಕಷಾಯ ಕುಡಿಯುವುದರಿಂದ ಆಂಟಿಬ್ಯಾಕ್ಟಿರೀಯಲ್ ಅಂಶ ದೊರೆಯುತ್ತದೆ.
*ಡೆಂಗೀ ತಡೆಗೆ ಮುಂಜಾಗೃತ ಕ್ರಮಗಳು*
-ಮನೆ, ಆಫೀಸ್ ನ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಕಸ, ಪ್ಲಾಸ್ಟಿಕ್ ವಸ್ತುಗಳು, ಟೈರ್ ಗಳು, ತೆಂಗಿನ ಚಿಪ್ಪು ಇತ್ಯಾದಿಗಳನ್ನು ತಕ್ಷಣ ವಿಲೇವಾರಿ ಮಾಡಬೇಕು. ನೀರಿನ ತೊಟ್ಟಿ, ಡ್ರಮ್, ಟ್ಯಾಂಕ್ ಗಳನ್ನು ಭದ್ರವಾಗಿ ಮುಚ್ಚಬೇಕು. ಹಗಲಿನಲ್ಲಿ ಮಲಗುವ ಅಭ್ಯಾಸ ಇದ್ದರೆ ಸೊಳ್ಳೆ ಪರದೆ, ಸೊಳ್ಳೆ ಬತ್ತಿ ಯನ್ನು ಹಚ್ಚುವುದು ಉತ್ತಮ.
ಮನೆಯ ಕಿಟಕಿ, ಬಾಗಿಲನ್ನು ಭದ್ರವಾಗಿ ಮುಚ್ಚಿರಬೇಕು.
ಡೆಂಗೀಜ್ವರ ಸೊಳ್ಳೆ ಕಡಿತದಿಂದ ಹರಡುತ್ತದೆ. ಆದ್ದರಿಂದ ನಾವೆ ಕೆಲವೊಂದು ಸ್ವಯಂರಕ್ಷಣಾ ವಿಧಾನಗಳನ್ನು ಅನುಸರಿಸಿ ಡೆಂಗೀ ಕಾಯಿಲೆಯಿಂದ ಪಾರಾಗಬೇಕಿದೆ.
-ಡಾ॥ಗ್ರೀಷ್ಮಾ ಗೌಡ ಆರ್ನೋಜಿ ,ವೈದ್ಯರು
ಹೊಯ್ಸಳ ಹೆಲ್ತ್ ಕೇರ್ ಮೂಡಿಗೆರೆ