ಅಧಿಕಾರಿಗಳು ಭೇಟಿ ನೀಡುವ ವಿಷಯ ತಿಳಿದು ಸ್ಥಳೀಯರ ಜಮಾವಣೆ
ವರದಿ ಬಂದ ನಂತರ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಅಧಿಕಾರಿಗಳು
ಇಂದಿನಿಂದಲೇ ಗಣಿಗಾರಿಕೆ ನಿಲ್ಲಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಧರಣಿ
ಗ್ರಾಮಸ್ಥರ ಪ್ರತಿಭಟನೆಗೆ ಅಂಬೇಡ್ಕರ್ ರಕ್ಷಣಾ ವೇದಿಕೆ ಸಾಥ್
ಮರ್ಕಂಜದ ಅಳವುಪಾರೆ ಗಣಿಗಾರಿಕೆ ಪ್ರದೇಶಕ್ಕೆ ಇಂದು ಗಣಿ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಅಧಿಕಾರಿಗಳು ಭೇಟಿ ನೀಡುವ ವಿಷಯ ತಿಳಿದು ಸ್ಥಳೀಯರ ಜಮಾವಣೆಗೊಂಡಿದ್ದು,ಇಂದಿನಿಂದಲೇ ಗಣಿಗಾರಿಕೆ ನಿಲ್ಲಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಧರಣಿ ನಡೆಸಿದರು. ಗ್ರಾಮಸ್ಥರ ಪ್ರತಿಭಟನೆಗೆ ಅಂಬೇಡ್ಕರ್ ರಕ್ಷಣಾ ವೇದಿಕೆ ಸಾಥ್ ನೀಡಿತು.
ವರದಿ ಬಂದ ನಂತರ ಕ್ರಮ ಕೈಗೊಳ್ಳುವ ಭರವಸೆಯನ್ನು ಅಧಿಕಾರಿಗಳು ನೀಡಿದರು.
ಮರ್ಕಂಜದಲ್ಲಿನ ಅಳವುಪಾರೆ ಗಣಿಗಾರಿಕೆಯ ಕುರಿತು ಕಳೆದ ಕೆಲವು ದಿನಗಳಿಂದ ಚರ್ಚೆಗಳು ನಡೆಯುತ್ತಿದ್ದವು. ಸುಳ್ಯದಲ್ಲಿ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಈ ವಿಷಯದ ಕುರಿತು ಭಾರೀ ಚರ್ಚೆಗಳು ನಡೆದಿದ್ದವು. ಮಾಧ್ಯಮಗಳಲ್ಲಿ ವರದಿಗಳು ಬಿತ್ತರಗೊಂಡಿದ್ದವು.
ಈ ಎಲ್ಲಾ ಕಾರಣಗಳಿಂದ ಪ್ರದೇಶಕ್ಕೆ ಗಣಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿಯನ್ನು ಸಂಗ್ರಹಿಸಿ, ಅಲ್ಲಿ ಸೇರಿದ್ದ ಸ್ಥಳೀಯರಿಂದ ಮತ್ತು ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಉಂಟಾಗುತ್ತಿರುವ ಸಮಸ್ಯೆಗಳ ಮಾಹಿತಿಗಳನ್ನು ಪಡೆದುಕೊಂಡರು.
ನಂತರ ಅಧಿಕಾರಿಗಳು ಮತ್ತು ಸ್ಥಳೀಯರ ನಡುವೆ ಮಾತುಕತೆ ನಡೆದು ನಾವು ಪಡೆದಿರುವ ವರದಿಯನ್ನು ಮೇಲಾಧಿಕಾರಿಗಳಿಗೆ ನೀಡಿ ಮುಂದಿನ ಕ್ರಮ ಜರುಗಿಸುವ ಬಗ್ಗೆ ಭರವಸೆಯನ್ನು ನೀಡಿದರು.
ಇದಕ್ಕೆ ಒಪ್ಪದ ಸ್ಥಳೀಯರು ವರದಿ ಮತ್ತು ಕ್ರಮವನ್ನು ಜರುಗಿಸುವ ವಿಷಯದ ಕುರಿತು ಈಗಿಂದೀಗಲೇ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಇಂದಿನಿಂದಲೇ ಗಣಿಗಾರಿಕೆಯನ್ನು ನಿಲ್ಲಿಸುವಂತೆ ಸ್ಥಳೀಯರು ಪಟ್ಟು ಹಿಡಿದರು ಎನ್ನಲಾಗಿದೆ.
ಇದಕ್ಕೆ ಒಪ್ಪದ ಅಧಿಕಾರಿಗಳು ಗಣಿಗಾರಿಕೆಯನ್ನು ನಿಲ್ಲಿಸಲು ನಮಗೆ ಅಧಿಕಾರವಿಲ್ಲ, ನಾವು ಕೇವಲ ವರದಿಯನ್ನು ಸಂಗ್ರಹಿಸಲು ಬಂದಿರುತ್ತೇವೆ ಎಂದು ಹೇಳಿದ್ದಾರೆ. ನಂತರ ಅಧಿಕಾರಿಗಳು ಅಲ್ಲಿಂದ ತೆರಳಿದ ಬೆನ್ನಲ್ಲೇ ಗ್ರಾಮಸ್ಥರಿಂದ ಧರಣಿ ಆರಂಭಗೊಂಡಿತು.
ಗಣಿಗಾರಿಕೆಯಿಂದ ಸ್ಥಳೀಯರಿಗೆ, ಧಾರ್ಮಿಕ ಕಟ್ಟಡಗಳಿಗೆ, ಶಾಲೆ ಹಾಗೂ ಜನವಸತಿ ಪ್ರದೇಶಕ್ಕೆ ಹಾನಿಯಾಗುತ್ತಿದ್ದು ತಕ್ಷಣ ಗಣಿಗಾರಿಕೆ ನಿಲ್ಲಿಸುವಂತೆ ಅಂಬೇಡ್ಕರ್ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಮರ್ಕಂಜದ ಹಳೆ ವಿದ್ಯಾರ್ಥಿ ಸಂಘ, ಭಜನಾ ಮಂದಿರದ ಪದಾಧಿಕಾರಿಗಳು, ಗ್ರಾಮಸ್ಥರು ಧರಣಿಯಲ್ಲಿ ತೊಡಗಿದರು.
ಮರ್ಕಂಜದ ಅಳವುಪಾರೆ ಗಣಿಗಾರಿಕೆಗೆ ಪಂಚಾಯತ್ ನ ಪರವಾನಗಿ ನವೀಕರಣವಾಗದಿದ್ದರೂ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದ ಜನವಸತಿ ಪ್ರದೇಶ ಹಾಗೂ ಸಾರ್ವಜನಿಕ ಕಟ್ಟಡಗಳಿಗೆ ಹಾನಿಯಾಗುತ್ತಿದೆ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸುತ್ತಿದ್ದು ತಕ್ಷಣ ಇದನ್ನು ನಿಲ್ಲಿಸುವಂತೆ ಆಗ್ರಹಿಸಿದರು.
ಗಣಿಗಾರಿಕೆ ಇಲಾಖೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದು ವರದಿ ಬರುವಲ್ಲಿಯವರೆಗೆ ಗಣಿ ಬಂದ್ ಮಾಡಲು ಪ್ರತಿಭಟನಾ ಕಾರರು ಆಗ್ರಹಿಸಿದ್ದಾರೆ.