ಎಂಡೋಸಲ್ಫಾನ್ ಪೀಡಿತರಾಗಿ ಮಲಗಿಯೇ ಬದುಕು, ವಿದ್ಯುತ್ ಹೋದರೆ ಬೆಳಕಿಲ್ಲದೇ ಜೀವನ ನಡೆಸಲು ಕಷ್ಟ ಪಡುತ್ತಿದ್ದ ಕುಟುಂಬವೊಂದಕ್ಕೆ ಸೋಲಾರ್ ಅಳವಡಿಸಿ ಮನೆಗೆ ಬೆಳಕು ಹಾಗೂ ಎಂಡೋಪೀಡಿತೆಗೆ ಮಲಗಲು ಮಂಚದ ವ್ಯವಸ್ಥೆ ಕಲ್ಪಿಸುವ ಕಾರ್ಯವನ್ನು ಭಾರತೀಯ ವಿಕಾಸನ ಟ್ರಸ್ಟ್ ಮಣಿಪಾಲ ಹಾಗೂ ಸೆಲ್ಕೋ ಸಂಸ್ಥೆ ನಡೆಸಿಕೊಟ್ಟಿದೆ.
ಬೆಳ್ಳಾರೆ ಗ್ರಾಮದ ಉಪ್ಪಂಗಳದ ಹಾಜಿರಾ ಅವರ ಮಗಳು ರಿಯಾನ ಹುಟ್ಟಿನಿಂದ ಎಂಡೋಸಲ್ಫಾನ್ ಕಾಯಿಲೆಯಿಂದ ಬಳಲುತ್ತಿದ್ದು ತೀರಾ ಬಡ ಕುಟುಂಬದವರು. ಹಾಜಿರಾ ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದಾರೆ. ರಿಯಾನ ೧೮ ವರ್ಷದಿಂದ ಮಲಗಿದಲ್ಲೇ ಇದ್ದು ತಾಯಿಯ ಆರೈಕೆಯಲ್ಲೆ ಬದುಕು. ಇವರ ಮನೆಯ ಸ್ಥಿತಿಯನ್ನು ಕಂಡ ಸೆಲ್ಕೊ ಸಂಸ್ಥೆಯ ಏರಿಯಾ ಮ್ಯಾನೇಜರ್, ವ್ಯವಸ್ಥಾಪಕ ಆಶಿಕ್ ಬಸವನಪಾದೆ ಅವರು ಮಣಿಪಾಲದ ಭಾರತೀಯ ವಿಕಾಸನ ಟ್ರಸ್ಟ್ ಅವರನ್ನು ಸಂಪರ್ಕಿಸಿ ಸಹಕಾರಕ್ಕೆ ವಿನಂತಿಸಿದ್ದರು.
ಸ್ಪಂದಿಸಿದ ಅವರು ಮನೆಗೆ ಸೋಲಾರ್ ಲೈಟ್ ಅಳವಡಿಕೆ ಹಾಗೂ ರಿಯಾನ ಮಲಗಲು ಮಂಚ, ಬೆಡ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ.
ಹಸ್ತಾಂತರ
ಹಸ್ತಾಂತರ ಕಾರ್ಯಕ್ರಮದಲ್ಲಿ ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಪನ್ನೆ ಸೋಲಾರ್ ವ್ಯವಸ್ಥೆಯನ್ನು ಹಸ್ತಾಂತರಿಸಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪದ್ಮನಾಭ ಮುಂಡೋಕಜೆ, ಸೆಲ್ಕೋ ಏರಿಯ ಮ್ಯಾನೇಜರ್ ಪ್ರಸಾದ್, ಸುಳ್ಯ ಶಾಖಾ ವ್ಯವಸ್ಥಾಪಕ ಆಶಿಕ್ ಬಸವನಪಾದೆ, ಸಿಬ್ಬಂದಿ ಜಗನ್ನಾಥ, ರಂಜಿತ್, ಸಾಮಾಜಿಕ ಕಾರ್ಯಕರ್ತ ನಾರಾಯಣ ಪಾಟಾಳಿ ಉಪಸ್ಥಿತರಿದ್ದರು.