ಸಂಪ್ಯ ಪೊಲೀಸ್ ಠಾಣೆಯಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷರಾಗಿ (ಎಎಸ್ಐ) ಕರ್ತವ್ಯ ನಿರ್ವಹಿಸುತ್ತಿದ್ದ ನಾರಾಯಣ ಗೌಡ ಚಿದ್ಗಲ್ ರವರು ಜೂ.30ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.
ಪೋಲೀಸ್ ಇಲಾಖೆಯಲ್ಲಿ ಸುದೀರ್ಘ 33 ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಚಿದ್ಗಲ್ ಮನೆಯ ದಿ.ಸುಬ್ಬಪ್ಪ ಮತ್ತು ದಿ.ಅಕ್ಕಮ್ಮ ದಂಪತಿಗಳ ಪುತ್ರ.
ಸೇವಾ ಪರಿಚಯ: ಇವರು ಪ್ರಾಥಮಿಕ ಶಿಕ್ಷಣವನ್ನು 1 ರಿಂದ 7ನೇ ತರಗತಿಯವರೆಗೆ ಮಡಪ್ಪಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 8ರಿಂದ 10ನೇ ತರಗತಿ ವರೆಗೆ ಸರಕಾರಿ ಪ್ರೌಢ ಶಾಲೆ ಗುತ್ತಿಗಾರು ಇಲ್ಲಿ ಪೂರ್ಣಗೊಳಿಸಿ ಪಿಯುಸಿ ವಿದ್ಯಾಭ್ಯಾಸವನ್ನು ಸರಕಾರಿ ಜೂನಿಯರ್ ಕಾಲೇಜು ಕೊಂಬೆಟ್ಟು, ಪುತ್ತೂರು ಇಲ್ಲಿ ಪೂರ್ಣಗೊಳಿಸಿರುತ್ತಾರೆ.
6-11-1990 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಆಯ್ಕೆಯಾಗಿ, ಪೊಲೀಸ್ ತರಬೇತಿ ಶಾಲೆ ಚೆನ್ನಪಟ್ಟಣದಲ್ಲಿ ತರಬೇತಿಯನ್ನು ಪಡೆದ ಬಳಿಕ ಕಾರ್ಕಳ ಪೊಲೀಸ್ ಠಾಣೆಯಲ್ಲಿ 1990-1994ರವರೆಗೆ ಸೇವೆ ನಿರ್ವಹಿಸಿದರು.
ನಂತರ ಅಲ್ಲಿಂದ ವರ್ಗಾವಣೆ ಹೊಂದಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ 1994ರಿಂದ 2000ರವರೆಗೆ ಸೇವೆ ಸಲ್ಲಿಸಿದ್ದು, ಅಲ್ಲಿಂದ ಕಡಬ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು 2008ರಲ್ಲಿ ಹೆಡ್ಕಾನ್ಸ್ಟೇಬಲ್ ಆಗಿ ಪದೋನ್ನತಿ ಹೊಂದಿ ಅದೇ ಠಾಣೆಯಲ್ಲಿ 2010ರವರೆಗೆ ಸುದೀರ್ಘವಾದ ನಿಷ್ಠಾವಂತ ಸೇವೆಗೆ ಸಾರ್ವಜನಿಕರಿಂದ ಸನ್ಮಾನ ಪಡದು ಜನಮನ್ನಣೆಗೆ ಪಾತ್ರರಾಗಿರುತ್ತಾರೆ.
2010 ರಿಂದ 2015 ವರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೇಳೆಯಲ್ಲಿ ವಾರೆಂಟ್ ಅಪರಾಧಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದುದರಿಂದ “ಉತ್ತಮ ಹೆಡ್ ಕಾನ್ಸ್ಟೇಬಲ್” ಎಂದು ಅಂದಿನ ರಜನೀಶ್ ಗೋಯಲ್ಯವರಿಂದ ಸನ್ಮಾನ ಸ್ವೀಕರಿಸಿದ್ದಾರೆ.
2015ರಲ್ಲಿ ಪುತ್ತೂರು ಸಂಚಾರಿ ಪೊಲೀಸ್ ಠಾಣೆಗೆ ವರ್ಗಾವಣೆ ಹೊಂದಿ 2017ರ ವರೆಗೆ ಸೇವೆ ಸಲ್ಲಿಸುತ್ತಿರುವ ಕಾಲಾವಧಿಯಲ್ಲಿ ಪದೋನ್ನತಿ ಹೊಂದಿ ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಸಂಪ್ಯ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿರುತ್ತಾರೆ.
ಈ ಕಾಲಾವಧಿಯಲ್ಲಿ ಕೊರೋನಾ ಸಂದರ್ಭದಲ್ಲಿ ಇವರ ಅನಿರತ ಸಮಾಜಮುಖಿ ಸೇವೆಗೆ “ಅತ್ಯುತ್ತಮ ಕೊರೋನಾ ವಾರಿಯರ್” ಎಂದು ಪುತ್ತೂರು ಸಹಾಯಕ ಕಮಿಷನರ್ರಿಂದ ಪ್ರಶಂಸೆಗೆ ಪಾತ್ರರಾಗಿರುತ್ತಾರೆ.
ಪ್ರಸ್ತುತ ಈ ವರುಷ 2022ರಲ್ಲಿ ತಮ್ಮ ಪೊಲೀಸ್ ಸೇವೆಯಿಂದ ನಿವೃತ್ತಿ ಪಡೆದಿರುತ್ತಾರೆ.
33ವರ್ಷಗಳ ಸೇವಾ ಅವಧಿಯಲ್ಲಿ ತಮ್ಮ ನಿಸ್ವಾರ್ಥ ಸೇವೆ ಹಾಗೂ ಸಾಧು ಸ್ವಭಾವದಿಂದ ಜನರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ.
ಸವಣೂರು ಗ್ರಾಮದ ಸೀತಾರಾಮ ಹಾಗೂ ಗಿರಿಜ ದಂಪತಿಗಳ ಪುತ್ರಿ ಶಶಿಪ್ರಭಾ ಇವರನ್ನು ವಿವಾಹವಾಗಿದ್ದು, ಪುತ್ರ ಕೃಷ್ಣೇಶ್ ಎಲಿಮಲೆ ಜ್ಞಾನದೀಪ ಶಾಲೆಯಲ್ಲಿ 8 ತರಗತಿಯಲ್ಲಿ ಕಲಿಯುತ್ತಿದ್ದಾನೆ. ಪುತ್ರಿ ಕಾವ್ಯಶ್ರೀರವರು ಮಡಿಕೇರಿಯಲ್ಲಿ ವಕೀಲರಾಗಿರುವ ಕಪಿಲ್ ಕುಮಾರ್ ದುಗ್ಗಳರವರನನ್ನು ವಿವಾಹವಾಗಿದ್ದು, ಪ್ರಸ್ತುತ ಮಗ ಲೋಖ್ಯಾತ್ ಕೆ.ಗೌಡರೊಂದಿಗೆ ಮಡಿಕೇರಿಯಲ್ಲಿ ನೆಲೆಸಿದ್ದಾರೆ.