ತುರ್ತು ದುರಸ್ತಿಗೊಳಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ
ಮೇಲ್ಛಾವಣಿ ಮುರಿತಕೊಳ್ಳಗಾದ ಜಟ್ಟಿಪಳ್ಳ ಶಾಲೆಗೆ ಕಾಂಗ್ರೆಸ್ ನಿಯೋಗ ಭೇಟಿ ನೀಡಿ, ದುರಸ್ತಿಗೊಳಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಭಾರೀ ಮಳೆಯ ಹಿನ್ನೆಲೆಯಲ್ಲಿ ಜಟ್ಟಿಪಳ್ಳ ಸರ್ಕಾರಿ ಶಾಲೆಯ ಮಾಡು ಮುರಿದು ಬಿದ್ದು ಶಾಲೆಯ ಗೋಡೆ ಬಿರುಕು ಬಿಟ್ಟಿತ್ತು. ಇಂದು ನಗರ ಪಂಚಾಯತ್ ಸದಸ್ಯ ಎಂ. ವೆಂಕಪ್ಪಗೌಡ ರ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಎಂ. ವೆಂಕಪ್ಪ ಗೌಡರು ಘಟನೆಯಿಂದ ಹಾನಿಗೊಳಗಾಗಿರುವ ಸ್ಥಳ ಮತ್ತು ಶಿಥಿಲಾವಸ್ಥೆಯಲ್ಲಿ ಇರುವ ಶಾಲೆಯ ಗೋಡೆಗಳು ಮತ್ತು ಮೇಲ್ಚಾವಣಿಗಳನ್ನು ವೀಕ್ಷಿಸಿ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಪಿ. ಮಹದೇವರವರಿಗೆ ದೂರವಾಣಿ ಮೂಲಕ ಮಾತನಾಡಿ, ಜಟ್ಟಿಪಳ್ಳ ಸರ್ಕಾರಿ ಶಾಲೆಯ ಈಗಿನ ಸ್ಥಿತಿಯ ಬಗ್ಗೆ ವಿವರಿಸಿ ಇದರ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.
ಇಲ್ಲಿ ಸುಮಾರು ೬೦ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಶಾಲೆಯ ಮೇಲ್ಚಾವಣಿ ಸಂಪೂರ್ಣ ಶಿಥಿಲಗೊಂಡಿದ್ದು ಏನಾದರೂ ಅಪಾಯ ಸಂಭವಿಸಿದರೆ ಯಾರು ಜವಾಬ್ದಾರರು? ಎಂದು ಕೇಳಿದರು.
ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಸಂಬಂಧಪಟ್ಟವರು ವಾರದೊಳಗೆ ಇದನ್ನು ಸರಿಪಡಿಸಿ ಕೊಡದಿದ್ದಲ್ಲಿ ನಾವು ಸ್ಥಳೀಯರನ್ನು ಮತ್ತು ಶಾಲೆಯ ವಿದ್ಯಾರ್ಥಿಗಳ ಪೋಷಕರನ್ನು ಸೇರಿಸಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದೂರವಾಣಿ ಮೂಲಕ ಮಾತನಾಡಿದ ಕೆಲವೇ ಕ್ಷಣಗಳಲ್ಲಿ ಶಿಕ್ಷಣಾಧಿಕಾರಿ ಮಹದೇವಪ್ಪ ಈ ಭಾಗದ ಸಿ ಆರ್ ಪಿ ಓ ಮಮತಾರವರೊಂದಿಗೆ ಶಾಲೆಗೆ ಬಂದರು.
ಶಾಲಾ ಶಿಕ್ಷಕರ ಕೊಠಡಿಯಲ್ಲಿ ಶಿಕ್ಷಕರೊಂದಿಗೆ ಮಾತನಾಡುತ್ತಿದ್ದ ಸಂದರ್ಭ ವೆಂಕಪ್ಪ ಗೌಡರು ಮತ್ತು ಅವರೊಂದಿಗೆ ಇದ್ದ ಕೆಲವರು ಅವರ ಬಳಿ ತೆರಳಿ ಆದಷ್ಟು ಶೀಘ್ರದಲ್ಲಿ ಶಾಲೆಯ ಬಗ್ಗೆ ಕ್ರಮ ಕೈಗೊಂಡು ಮುಂದೆ ಉಂಟಾಗಬಹುದಾದ ಅಪಾಯದಿಂದ ಶಾಲಾ ವಿದ್ಯಾರ್ಥಿಗಳನ್ನು, ಮತ್ತು ಶಾಲಾ ಕಟ್ಟಡವನ್ನು ಉಳಿಸುವಂತೆ ಕೇಳಿಕೊಂಡರು.
ಈ ವೇಳೆ ಮಾತನಾಡಿದ ಶಿಕ್ಷಣಾಧಿಕಾರಿ ಶಾಲೆಗೆ ಹಾನಿ ಉಂಟಾದ ಅದೇ ದಿನ ನಾನು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇದರ ಬಗ್ಗೆ ಸುಳ್ಯ ತಹಶೀಲ್ದಾರರ, ಹಾಗೂ ಮೇಲಾಧಿಕಾರಿಗಳ ಗಮನಕ್ಕೆ ವಿಷಯ ತಂದಿರುತ್ತೇನೆ.
ಇದಕ್ಕೆ ಸ್ಪಂದಿಸಿರುವ ಅವರು ದುರಸ್ತಿ ಕಾರ್ಯಕ್ಕಾಗಿ ಈಗಾಗಲೇ ೩ ಲಕ್ಷ ರೂಪಾಯಿಗಳ ಅನುದಾನವನ್ನು ಬಿಡುಗಡೆಗೊಳಿಸಿದ್ದು ನಿರ್ಮಿತಿ ಕೇಂದ್ರದವರ ಬಳಿ ೨ ಲಕ್ಷ ರೂಪಾಯಿಗಳ ಅನುದಾನವಿದ್ದು ಅವೆಲ್ಲವನ್ನು ಸೇರಿಸಿ ೫ ಲಕ್ಷ ರೂಪಾಯಿಗಳಲ್ಲಿ ಶೀಘ್ರದಲ್ಲಿ ದುರಸ್ತಿ ಕಾರ್ಯ ನಡೆಸುವುದಾಗಿ ಮಾಹಿತಿ ನೀಡಿದರು.
ಶಿಕ್ಷಣಾಧಿಕಾರಿಯಾಗಿ ಶಾಲೆಯ ಮಕ್ಕಳ ಮತ್ತು ಶಾಲಾ ಕಟ್ಟಡ ಉಳಿವಿಗಾಗಿ ಇನ್ನು ಬೇರೆ ಬೇರೆ ಇಲಾಖೆಗಳಲ್ಲಿ ಮಾತನಾಡಿ ಹೆಚ್ಚಿನ ಅನುದಾನ ತರುವಲ್ಲಿ ಪ್ರಯತ್ನಿಸುವುದಾಗಿ ಅವರು ಭರವಸೆಯನ್ನು ನೀಡಿದರು.
ಈ ವೇಳೆ ವೆಂಕಪ್ಪ ಗೌಡರು ಮಾತನಾಡಿ ಒಂದು ವಾರದಲ್ಲಿ ಆ ಕಾರ್ಯವನ್ನು ಮಾಡಿಕೊಡುವಂತೆ ಆಗ್ರಹಿಸಿ, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸ್ಥಳೀಯರನ್ನು, ಮತ್ತು ವಿದ್ಯಾರ್ಥಿಗಳ ಪೋಷಕರನ್ನು ಸೇರಿಸಿ ಪ್ರತಿಭಟನೆ ಮಾಡಲು ನಾವು ಸಿದ್ಧರಿದ್ದೇವೆ ಎಂದು ಹೇಳಿ ಅವರೊಂದಿಗೆ ಬಂದಿದ್ದ ಕಾಂಗ್ರೆಸ್ ಪಕ್ಷದ ಮುಖಂಡರುಗಳು, ಸ್ಥಳೀಯರು ಅಲ್ಲಿಂದ ತೆರಳಿದರು.
ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯ ಧೀರ ಕ್ರಾಸ್ತ, ಮಾಜಿ ಸದಸ್ಯರುಗಳಾದ ನಾರಾಯಣ ಜಟ್ಟಿಪಳ್ಳ, ಜೂಲಿಯಾನ ಕ್ರಾಸ್ತಾ, ಸ್ಥಳೀಯರಾದ ಎಸ್ಎಎಸ್ ಮಹಮ್ಮದ್, ರಮ್ಯಾ ಜಟ್ಟಿಪಳ್ಳ, ಅಬ್ದುಲ್ಲ, ಪ್ರಸಾದ್ ಜೆ, ಮಧುಚಂದ್ರ, ಶರತ್, ವಸಂತ, ರಕ್ಷಣ್, ಸುಲೈಮಾನ್ ಬಾರಿಕಾಡ್ ಮೊದಲಾದರು ಉಪಸ್ಥಿತರಿದ್ದರು.