ಐವರ್ನಾಡಿನ ದಿ.ಎನ್.ಎಂ.ಬಾಲಕೃಷ್ಣ ಗೌಡರ ಪುತ್ಥಳಿ ರಚನಾ ಸಮಿತಿ ವತಿಯಿಂದ ಐವರ್ನಾಡಿನಲ್ಲಿ ಐತಿಹಾಸಿಕ ಪುತ್ಥಳಿ ರಚನೆಗೆ ಕಾರಣಕರ್ತರಾದ ಊರಿನ ಸಮಸ್ತ ಜನತೆಗೆ ಅಭಿನಂದನಾ ಸಭೆ ಮತ್ತು ಪುತ್ಥಳಿ ರಚನೆಯ ಲೆಕ್ಕಪತ್ರ ಮಂಡನೆಯು ಜು.04 ರಂದು ಸಂಜೆ ಗ್ರಾಮ ವಿಕಾಸ ಸಭಾಭವನದಲ್ಲಿ ನಡೆಯಿತು.
ಪುತ್ಥಳಿ ರಚನಾ ಸಮಿತಿ ಕೋಶಾಧಿಕಾರಿ ರವಿಪ್ರಸಾದ್ ಸಿ.ಕೆ.ಸ್ವಾಗತಿಸಿ ಲೆಕ್ಕಪತ್ರ ಮಂಡಿಸಿದರು.
ಪುತ್ಥಳಿ ರಚನೆಗೆ ಜನರಿಂದ ಒಟ್ಟು 13,39,057 ರೂ ಕಲೆಕ್ಷನ್ ಬಂದಿದ್ದು 12,88,318 ರೂ.ಖರ್ಚಾಗಿದೆ.ರೂ 50,739 ರೂ ಉಳಿಕೆ ಹಣ ಇದೆ ಎಂದು ಹೇಳಿದರು.
ಎಲ್ಲಾ ಖರ್ಚಿನ ವಿವರಗಳನ್ನು ಸಭೆಯಲ್ಲಿ ವಿವರವಾಗಿ ಮಂಡಿಸಿದರು.
ಸ್ಮರಣ ಸಂಚಿಕೆ ಕೆಲಸ ಅಂತಿಮ ಹಂತದಲ್ಲಿದ್ದು ಮುದ್ರಣವಾಗಬೇಕಷ್ಟೆ ಅದಕ್ಕೆ ಉಳಿಕೆ ಹಣವನ್ನು ಬಳಸಿಕೊಳ್ಳಲಾಗುವುದು ಎಂದು ಹೇಳಿದರು.
ಪುತ್ಥಳಿ ರಚನಾ ಸಮಿತಿ ಅಧ್ಯಕ್ಷ ಎಸ್.ಎನ್.ಮನ್ಮಥರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಐವರ್ನಾಡಿನ ಎಲ್ಲಾ ಜನರ ಸಂಪೂರ್ಣ ಸಹಕಾರದಿಂದ ಉತ್ತಮವಾಗಿ ದಿ.ಎನ್.ಎಂ.ಬಾಲಕೃಷ್ಣ ಗೌಡರ ಪುತ್ಥಳಿ ನಿರ್ಮಾಣವಾಗಿದೆ.
ಇನ್ನು ಪ್ರತೀ ವರ್ಷ ಎಪ್ರಿಲ್ 11 ರಂದು ಕಾರ್ಯಕ್ರಮವನ್ನು ಮಾಡುವ ಮುಖಾಂತರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು ಎಂದು ಹೇಳಿದರು.
ಪುತ್ಥಳಿಯ ಸುತ್ತ ಇರುವ ಹೂವಿನ ಗಿಡಗಳಿಗೆ ನೀರು ಹಾಕುವುದು ಮತ್ತು ಪುತ್ಥಳಿಯ ಎದುರುಗಡೆ ಸಹಕಾರಿ ಸಂಘದ ವತಿಯಿಂದ ಸ್ಬಚ್ಛತಾ ಕಾರ್ಯ ಮಾಡಲಾಗುತ್ತದೆ ಎಂದು ಹೇಳಿದರು.
ಸಮಿತಿಯ ಗೌರವಾಧ್ಯಕ್ಷೆ ಶ್ರೀಮತಿ ಜ್ಯೊತ್ಸ್ನಾ ಪಾಲೆಪ್ಪಾಡಿ ಮಾತನಾಡಿ ಗ್ರಾಮದ ಜನರ ಸಂಪೂರ್ಣ ಸಹಕಾರದಿಂದ ಪುತ್ಥಳಿ ನಿರ್ಮಾಣ ಮಾಡಲು ಸಾಧ್ಯವಾಯಿತು.
ನಾನು ಹೆಚ್ಚು ಪರವೂರಲ್ಲಿ ಇದ್ದರೂ ಐವರ್ನಾಡಿನ ಜನರು ನಮ್ಮ ಮೇಲೆ ಪ್ರೀತಿ ವಿಶ್ವಾಸ ಇರಿಸಿದ್ದಾರೆ.
ಈಗ ಐವರ್ನಾಡಿನಲ್ಲೇ ಉಳಿದುಕೊಳ್ಳುವಂತೆ ನನಗೆ ಮನಸ್ಸು ಆಗಿದೆ ಎಂದು ಹೇಳಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಮಡ್ತಿಲ,
ಉಪಾಧ್ಯಕ್ಷರಾದ ಮಾಧವ ಭಟ್ ಶೃಂಗೇರಿ, ಪದ್ಮನಾಭ ಗೌಡ ನೂಜಾಲು,ಬಾಲಕೃಷ್ಣ ಕೀಲಾಡಿ, ಶ್ರೀಮತಿ ಸುಜಾತ ಪವಿತ್ರಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ಹಿರಿಯರಾದ ನೆಕ್ರೆಪ್ಪಾಡಿ ಕೃಷ್ಣಪ್ಪ ಗೌಡ,ಉಮೇಶ್ ಮಾಸ್ತರ್ ಪಲ್ಲತ್ತಡ್ಕ, ಶಿವರಾಮ ಗೌಡ ನೆಕ್ರೆಪ್ಪಾಡಿ ಹಾಗೂ ಮತ್ತಿತರರು ಪುತ್ಥಳಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.