ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಹೆಚ್ಚಾಗಿದ್ದು, ಸುಬ್ರಹ್ಮಣ್ಯ ಮತ್ತು ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ನದಿ ಕುಮಾರಧಾರಾ ನದಿಗಳಲ್ಲಿ ನೀರಿನ ಹರಿವು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.
ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದ ಹಿನ್ನಲೆಯಲ್ಲಿ ಸ್ನಾನಘಟ್ಟ ನದಿ ನೀರಿನಲ್ಲಿ ಸಂಪೂರ್ಣ ಮುಳುಗಡೆಯಾಗಿದೆ. ಸ್ನಾನಘಟ್ಟ ಮಾತ್ರವಲ್ಲದೆ, ಸ್ನಾನಘಟ್ಟದ ಬಳಿಯಿರುವ ದೇವರಕಟ್ಟೆಯೂ ಭಾಗಶಃ ಮುಳುಗಡೆಯಾಗಿದ್ದು, ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ತೀರ್ಥಸ್ನಾನ ನೆರವೇರಿಸಲು ತೊಂದರೆಯಾಗಿದೆ. ಭಕ್ತಾಧಿಗಳು ಪ್ರವಾಹದ ನೀರಿನಲ್ಲೇ ತೀರ್ಥಸ್ನಾನವನ್ನು ನೆರವೇರಿಸುತ್ತಿದ್ದು ,ದೇವಸ್ಥಾನದ ವತಿಯಿಂದ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಸ್ನಾನಘಟ್ಟದಲ್ಲಿ ರಾತ್ರಿ- ಹಗಲು ಎರಡು ಜನರಿರುವ ರಕ್ಷಕ ದಳವನ್ನು ನಿಯೋಜಿಸಲಾಗಿದೆ. ಭಕ್ತಾಧಿಗಳಿಗೆ ತೀರ್ಥಸ್ನಾನ ನೆರವೇರಿಸಲು ನೆರವಾಗುವ ನಿಟ್ಟಿನಲ್ಲಿ ಕುಮಾರಧಾರಾ ನದಿ ತೀರದಲ್ಲಿ ಹಗ್ಗವನ್ನು ಅಳವಡಿಸಿ, ಹಗ್ಗದ ಸಹಾಯದ ಮೂಲಕ ತೀರ್ಥಸ್ನಾನ ನೆರವೇರಿಸಲು ಅನುವು ಮಾಡಿಕೊಡಲಾಗಿದೆ. ಸ್ನಾನಘಟ್ಟ ಮಾತ್ರವಲ್ಲದೆ ದೇವಸ್ಥಾನದ ಪಕ್ಕದಲ್ಲೇ ಹರಿಯುವ ದರ್ಪಣ ತೀರ್ಥ ಹೊಳೆಯಲ್ಲೂ ನೀರಿನ ಹರಿವು ಹೆಚ್ಚಾಗಿದ್ದು, ಹೊಳೆ ನೀರು ಆಸುಪಾಸಿನ ಕೃಷಿ ತೋಟಗಳಿಗೆ ನುಗ್ಗಲಾರಂಭಿಸಿದೆ.