ಸುಳ್ಯ ನ್ಯಾಯಾಲಯದ ಸಿಜೆ & ಜೆಎಂಎಫ್‌ಸಿ ಕಿರಿಯ ವಿಭಾಗದ ನ್ಯಾಯಾಧೀಶರಾಗಿ ಪ್ರಥಮ ಬಾರಿಗೆ ಮಹಿಳಾ ನ್ಯಾಯಾಧೀಶೆ ಶ್ರೀಮತಿ ಅರ್ಪಿತಾ ಕರ್ತವ್ಯಕ್ಕೆ

0
970

ಸುಳ್ಯ ತಾಲೂಕು ವಕೀಲರ ಸಂಘದ ವತಿಯಿಂದ ನೂತನ ನ್ಯಾಯಾಧೀಶರಿಗೆ ಸ್ವಾಗತ

p>

ಸುಳ್ಯ ನ್ಯಾಯಾಲಯದ ಸಿಜೆ & ಜೆಎಂಎಫ್‌ಸಿ ಕಿರಿಯ ವಿಭಾಗದ ನ್ಯಾಯಾಧೀಶರಾಗಿ ಪ್ರಥಮ ಬಾರಿಗೆ ಮಹಿಳಾ ನ್ಯಾಯಾಧೀಶೆ ಶ್ರೀಮತಿ ಅರ್ಪಿತಾರವರು ಇಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಉಡುಪಿ ಮೂಲದ ಅರ್ಪಿತಾ ರವರು ಪ್ರಪ್ರಥಮ ಬಾರಿಗೆ ನ್ಯಾಯಾಧೀಶರಾಗಿ ಸುಳ್ಯ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಹತ್ತು ವರ್ಷಗಳ ಕಾಲ ಸುದೀರ್ಘ ತರಬೇತಿ ಪಡೆದಿರುವ ಇವರು ವಕೀಲೆಯಾಗಿ ಕೂಡ ಕರ್ತವ್ಯ ನಿರ್ವಹಿಸಿದ್ದಾರೆ.


ಕಳೆದ ೩ ತಿಂಗಳ ಹಿಂದೆ ಸುಳ್ಯ ನ್ಯಾಯಾಲಯದ ಕಿರಿಯ ವಿಭಾಗದ ನ್ಯಾಯಾಧೀಶ ಯಶ್ವಂತ್‌ಕುಮಾರ್‌ರವರ ವರ್ಗಾವಣೆಯ ಬಳಿಕ ಕಿರಿಯ ವಿಭಾಗದ ಎಲ್ಲಾ ಪ್ರಕರಣಗಳು ಪುತ್ತೂರು ಮತ್ತು ಬೆಳ್ತಂಗಡಿ ನ್ಯಾಯಾಲಯಗಳಲ್ಲಿ ನಡೆಯುತ್ತಿತ್ತು. ಇದೀಗ ಸುಳ್ಯ ನ್ಯಾಯಾಲಯದ ಕಿರಿಯ ವಿಭಾಗಕ್ಕೆ ನ್ಯಾಯಾಧೀಶೆ ಶ್ರೀಮತಿ ಅರ್ಪಿತಾರವರ ಆಗಮನದೊಂದಿಗೆ ಎಲ್ಲಾ ಕಾರ್ಯ ಕಲಾಪಗಳು ಇಂದಿನಿಂದ ಸುಳ್ಯ ನ್ಯಾಯಾಲಯದಲ್ಲಿ ನಡೆಯಲಿದೆ.

ನ್ಯಾಯಾಧೀಶರ ಆಗಮನವಾದ ಹಿನ್ನೆಲೆಯಲ್ಲಿ ಸುಳ್ಯ ವಕೀಲರ ಸಂಘದ ವತಿಯಿಂದ ಅವರಿಗೆ ಸ್ವಾಗತ ಕಾರ್ಯಕ್ರಮವನ್ನು ಸುಳ್ಯ ವಕೀಲರ ಸಭಾಂಗಣದಲ್ಲಿ ನಡೆಸಿ ವಕೀಲರ ಸಂಘದ ಅಧ್ಯಕ್ಷ ಕೆ ನಾರಾಯಣ ನೂತನ ನ್ಯಾಯಾಧೀಶರಿಗೆ ಹೂಗುಚ್ಛವನ್ನು ನೀಡಿ ಸ್ವಾಗತಿಸಿದರು.


ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಕಳೆದ ಮೂರು ತಿಂಗಳುಗಳಿಂದ ಸುಳ್ಯ ನ್ಯಾಯಾಲಯದ ಕಿರಿಯ ವಿಭಾಗಕ್ಕೆ ನ್ಯಾಯಾಧೀಶರಿಲ್ಲದ ಕಾರಣ ಪುತ್ತೂರು ಮತ್ತು ಬೆಳ್ತಂಗಡಿ ನ್ಯಾಯಾಲಯಕ್ಕೆ ಹೋಗುವಂತಾಗಿತ್ತು. ಇದರ ಬಗ್ಗೆ ಸರಕಾರದ ಗಮನಕ್ಕೆ ವಿಷಯವನ್ನು ಪ್ರಸ್ತಾಪಿಸಿ ಸುಳ್ಯ ನ್ಯಾಯಾಲಯದ ಕಿರಿಯ ವಿಭಾಗಕ್ಕೆ ಆದಷ್ಟು ಶೀಘ್ರದಲ್ಲಿ ನ್ಯಾಯಾಧೀಶರನ್ನು ನೀಡುವಂತೆ ಮನವಿ ಮಾಡಲಾಗಿತ್ತು.
ಇದೀಗ ನಮ್ಮ ನ್ಯಾಯಾಲಯಕ್ಕೆ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಮಹಿಳಾ ನ್ಯಾಯಾಧೀಶರು ಬಂದಿದ್ದು ವಕೀಲರ ಸಂಘದ ವತಿಯಿಂದ ಅವರಿಗೆ ಸ್ವಾಗತವನ್ನು ಕೋರುವ ಮೂಲಕ ಅಭಿನಂದನೆಯನ್ನು ಸಲ್ಲಿಸಿದರು.

 

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಸೋಮಶೇಖರ ಎ. ಉಪಸ್ಥಿತರಿದ್ದು ನೂತನ ನ್ಯಾಯಾಧೀಶರಿಗೆ ಶುಭ ಹಾರೈಸಿ ಮಾತನಾಡಿ ನೂತನ ನ್ಯಾಯಾಧೀಶರ ಕಲಿಕೆ ಮತ್ತು ಅನುಭವದ ಬಗ್ಗೆ ಪ್ರಸ್ತಾಪಿಸಿ ಮುಂದಿನ ನಾಲ್ಕು ವರ್ಷಗಳ ಕಾಲ ಸುಳ್ಯದಲ್ಲಿ ಸೇವೆ ಸಲ್ಲಿಸಲಿದ್ದು ತಮ್ಮೆಲ್ಲರ ಸಹಕಾರ ಅಗತ್ಯವಾಗಿದೆ. ಮುಂದಿನ ಅವರ ಸೇವಾ ಅವಧಿ ಶುಭವಾಗಿರಲಿ ಎಂದು ಹಾರೈಸಿದರು. ಎಪಿಪಿ ಜನಾರ್ಧನ್, ಸಂಘದ ಕಾರ್ಯದರ್ಶಿ ವಿನಯ ಮುಳುಗಾಡು ವೇದಿಕೆಯಲ್ಲಿದ್ದರು.

 


ಸಂಘದ ಕಾರ್ಯದರ್ಶಿ ವಿನಯ ಮುಳುಗಾಡು ಸ್ವಾಗತಿಸಿ, ಕೋಶಾಧಿಕಾರಿ ಜಗದೀಶ್ ವಂದಿಸಿದರು.
ಹಿರಿಯ ವಕೀಲ ದಳ ಸುಬ್ರಾಯ ಭಟ್ ಕಾರ್ಯಕ್ರಮ ನಿರೂಪಿಸಿದರು.
ಸ್ವಾಗತ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಎಲ್ಲಾ ಸದಸ್ಯರು, ಹಿರಿಯ, ಕಿರಿಯ ವಕೀಲರುಗಳು, ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here